ಧಾರವಾಡ : ದುರ್ದೈವ.. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿಳುವಳಿಕೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜಾತಿ ನಿಂದನೆ ಮಾಡಿರುವ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಲವು ಬಾರಿ ಮೋದಿ ಬಗ್ಗೆ ಜಾತಿ ನಿಂದನೆ ಮಾಡಿದ್ದಾರೆ. ಈಗಾಗಲೇ ಈ ರೀತಿ ಮಾಡಿ ಎರಡು ವರ್ಷ ಶಿಕ್ಷೆ ಅನುಭವಿಸಿದ್ದಾರೆ. ತಾತ್ಕಾಲಿಕ ಸ್ಟೇ ಸಿಕ್ಕಿದೆ ಎಂದು ಟೀಕಿಸಿದರು.
ಸುಪ್ರೀಂ ಕೋರ್ಟ್ ಸಹ ಸ್ಟೇ ಮಾಡುವಾಗ ಬಹಳ ಸ್ಪಷ್ಟವಾಗಿ ಹೇಳಿದೆ. ಯಾರು ತಮ್ಮನ್ನು ತಾವು ನಾಯಕರೆಂದು ತಿಳಿದುಕೊಳ್ಳುತ್ತಾರೋ? ಅವರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಹೇಳಿದೆ. ಈ ರೀತಿ ಅವರು ಮಾತನಾಡುತ್ತಿರುತ್ತಾರೆ. ಜನ ಅವರಿಗೆ ಬುದ್ಧಿ ಕಲಿಸಿದ್ದಾರೆ. ಮಮತಾ ಬ್ಯಾನರ್ಜಿ ಹೇಳಿದಂತೆ ಅವರು ಇದೇ ರೀತಿ ಮಾತನಾಡುತ್ತ ಹೋಗಲಿ. ಈ ಬಾರಿ ಲೋಕಸಭೆಯಲ್ಲಿ 40ಕ್ಕಿಂತ ಅವರು ಕಡಿಮೆ ಆಗುತ್ತಾರೆ ಎಂದು ಛೇಡಿಸಿದರು.
ಸಮರ್ಥರಿಗೆ ಖಂಡಿತ ಟಿಕೆಟ್ ಕೊಡುತ್ತಾರೆ
ಲೋಕಸಭಾ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ವಿಚಾರವಾಗಿ ಮಾತನಾಡಿ, ಒಂದೇ ಪಾಲಿಸಿ ಎಲ್ಲ ಕಡೆ ಅಪ್ಲೈ ಆಗೋದಿಲ್ಲ. ನಮ್ಮ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಎಲ್ಲೆಲ್ಲಿ ಅಗತ್ಯ ಇದೆ ಅಲ್ಲಿ ಬದಲಾವಣೆ ಮಾಡುತ್ತಾರೆ. ಯಾರು ಚೆನ್ನಾಗಿದ್ದಾರೋ ಅವರಿಗೆ ಖಂಡಿತ ಟಿಕೆಟ್ ಕೊಡುತ್ತಾರೆ. ವಿಧಾನಸಭೆಗೆ ಬದಲಾವಣೆ ಮಾಡಿದಂತೆ ಇಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವ ಪಾಲಿಸಿ ಇಲ್ಲ ಎಂದು ಹೇಳಿದರು.
ಅವ್ರ ನಾಲಗೆ ಅವ್ರ ಸಂಸ್ಕೃತಿ ತೋರಿಸುತ್ತದೆ
ವಿರೋಧ ಪಕ್ಷದವರು ಗೂಂಡಾಗಳಿದ್ದಂತೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೂಂಡಾಗಳು ಯಾರ ಪಾರ್ಟಿಯಲ್ಲಿ ಎಷ್ಟು ಜನ ಇದ್ದಾರೆ? ಅವರ ಈ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ನಾಲಗೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.