Saturday, November 23, 2024

‘ದಿಲ್ಲಿ ಚಲೋ’ ಹೋರಾಟ; ದೆಹಲಿಯಲ್ಲಿ 1 ತಿಂಗಳು ನಿಷೇಧಾಜ್ಞೆ!

ಹೊಸದಿಲ್ಲಿ: ಇಂದು ರೈತ ಸಂಘಟನೆಗಳು ದಿಲ್ಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಅಭೂತಪೂರ್ವ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆ ನಿರಂತರ ಒಂದು ತಿಂಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಐಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದು ಮಾರ್ಚ್ 12ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಸಂಬಂಧ ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ನಿನ್ನೆ ಸಮಗ್ರ ಮಾಹಿತಿ ನೀಡಿದ್ದು, ಸುತ್ತೋಲೆಯನ್ನೂ ಹೊರಡಿಸಿದ್ದಾರೆ.

ಪಂಜಾಬ್‌ ಹಾಗೂ ದೇಶದ ಇತರೆಡೆಗಳ ಪ್ರತಿಭಟನಾನಿರತ ರೈತರು ಇಂದು ದಿಲ್ಲಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಕೇಂದ್ರ ಸಚಿವರ ಜೊತೆ ಐದು ಗಂಟೆಗಳ ಕಾಲ ರೈತ ನಾಯಕರು ನಡೆಸಿದ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ. ರೈತರ ಪ್ರಮುಖ ಬೇಡಿಕೆಯಾದ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆಯ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ.

ಇದನ್ನೂ ಓದಿ: ಫೆ.14 ರಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ 5ನೇ ವರ್ಷದ ಶ್ರದ್ದಾಂಜಲಿ ಕಾರ್ಯಕ್ರಮ!

ಚಂಡೀಗಢದಲ್ಲಿ ಕೇಂದ್ರ ಸಚಿವರೊಂದಿಗೆ ರೈತರ ಸಭೆ ನಡೆಯಿತು. ಎರಡು ವರ್ಷಗಳ ಹಿಂದೆ ಕೃಷಿ ಕಾನೂನು ವಿರುದ್ಧ ಪ್ರತಿಭಟನೆಗಳ ನಂತರ ಇದೀಗ ಸಂಧಾನದ ಕೊನೆಯ ಪ್ರಯತ್ನ ಬಹುತೇಕ ಮಧ್ಯರಾತ್ರಿಯವರೆಗೆ ಮುಂದುವರೆಯಿತು. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವ ಅರ್ಜುನ್ ಮುಂಡಾ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.

ರಾತ್ರಿ 11 ಗಂಟೆಯ ನಂತರ, ಎರಡೂ ಕಡೆಯವರು ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಚಳವಳಿಯ ಸಂದರ್ಭದಲ್ಲಿ ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಒಪ್ಪಂದಕ್ಕೆ ಬಂದರು.

ಆದರೆ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ಒಮ್ಮತ ಮೂಡಲಿಲ್ಲ. ಅವು ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ. ಸಭೆ ಮುಗಿದ ನಂತರ, ʼದೆಹಲಿ ಚಲೋ’ ಮೆರವಣಿಗೆ ನಡೆಯಲಿದೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ಹೇಳಿದರು.
“ಎರಡು ವರ್ಷಗಳ ಹಿಂದೆ ಸರ್ಕಾರವು ನಮ್ಮ ಅರ್ಧದಷ್ಟು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತವಾಗಿ ಭರವಸೆ ನೀಡಿತ್ತು. ನಾವು ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಬಯಸಿದ್ದೇವೆ. ಆದರೆ ಸರ್ಕಾರವು ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ. ಅವರು ಸಮಯ ವ್ಯರ್ಥ ಮಾಡಲು ಬಯಸುತ್ತಿದ್ದಾರೆ” ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES