ರಾಯಚೂರು: ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನ ತಡೆದಿದ್ದಕ್ಕೆ ಪೊಲೀಸ್ ಪೇದೆ ಮೇಲೆ ಮರಳು ದಂಧೆಕೋರರು ಹಲ್ಲೆ ನಡೆಸಿರುವ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ್ ಪುತ್ರನ ಗ್ಯಾಂಗ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಹನುಮಂತ ಹಲ್ಲೆಗೊಳಗಾದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್. ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನ ತಡೆದಿದ್ದಕ್ಕೆ ಪೇದೆಯನ್ನು ಸರ್ಕಾರಿ ಅತಿಥಿ ಗೃಹದಲ್ಲಿ ಹಾಕಿ ಮನಬಂದಂತೆ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ: ಫೆ.20 ರಿಂದ ಕನ್ನಡದಲ್ಲೇ ನಡೆಯಲಿದೆ ಅರೆಸೇನಾ ಪಡೆಗಳ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ!
ಶಾಸಕಿ ಪುತ್ರ ಸಂತೋಷ ಮತ್ತು ಆಪ್ತ ಸಹಾಯಕ ಇಲಿಯಾಸ್ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲಿಯಾಸ್ ಅವರು ಶಾಸಕಿಯ ಸರ್ಕಾರಿ ಆಪ್ತಸಹಾಯಕರಾಗಿದ್ದಾರೆ. 2 ಟ್ರ್ಯಾಕ್ಟರ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಆದರೆ, ಆ ಟ್ರ್ಯಾಕ್ಟರ್ ಶಾಸಕಿ ಪುತ್ರನಿಗೆ ಸಂಬಂಧಿಸಿದ್ದಾಗಿತ್ತು ಎನ್ನಲಾಗಿದೆ.
ಇದೇ ವಿಚಾರಕ್ಕೆ ಪೊಲೀಸ್ ಪೇದೆ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಗಾಯಾಳು ಪೇದೆ ಹನುಮಂತ ಅವರನ್ನು ದೇವದುರ್ಗ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಶಾಸಕಿಯ ಪುತ್ರನ ದರ್ಪಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.