ರಾಮನಗರ : ದೇಶದಲ್ಲಿ ಯಾವ ಸರ್ಕಾರವೂ ಉಚಿತ ಗ್ಯಾರಂಟಿ ಜಾರಿ ಮಾಡಿಲ್ಲ. ನಾವು ಕಷ್ಟಪಟ್ಟು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿಯನ್ನು ಗ್ರೇಟರ್ ಬ್ಯಾಂಗಳೂರಿಗೆ ಸೇರಿಸುತ್ತಿದ್ದೇವೆ. ನಾವೆಲ್ಲ ಬೆಂಗಳೂರು ಜಿಲ್ಲೆಯವರು ಎನ್ನುವ ಮೂಲಕ ಮತ್ತೆ ರಾಮನಗರ ಜಿಲ್ಲೆಯನ್ನ ಬೆಂಗಳೂರಿಗೆ ಸೇರ್ಪಡೆ ಬಗ್ಗೆ ಪುನರುಚ್ಚಾರ ಮಾಡಿದರು.
ಚುನಾವಣೆ ಆದಮೇಲೆ ಈ ವಿಚಾರ ಮಾತನಾಡುತ್ತೇನೆ. ಬಿಡದಿಗೆ ಮೆಟ್ರೋ ಬಂದೇ ಬರುತ್ತದೆ. ಇದಕ್ಕೆ ಡಿಪಿಆರ್ ರೆಡಿ ಮಾಡುತ್ತಿದ್ದೇವೆ. ರಾಮನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜಕಾರಣ ಮಾಡಬೇಡಿ ಎನ್ನಲು ಆಗುತ್ತಾ?
ಸಂಸದ ಡಿ.ಕೆ. ಸುರೇಶ್ ಸೋಲಿಸಲು ಸಿ.ಪಿ. ಯೋಗೇಶ್ವರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ನವರು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣ ಮಾಡುವವರನ್ನು ಬೇಡ ಎನ್ನಲು ಆಗುತ್ತಾ..? ಹಿಂದೆಯೂ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಒಂದೇ ಅಭ್ಯರ್ಥಿ ಹಾಕಿದ್ರು. ಬೆಂಗಳೂರು ಗ್ರಾಮಾಂತರದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರು. ಆಗ ಬಿಜೆಪಿಯವರು ಅಭ್ಯರ್ಥಿ ಹಾಕಿರಲಿಲ್ಲ ಎಂದು ಕುಟುಕಿದರು.
ಈ ಜಿಲ್ಲೆಗೆ ನಿಮ್ಮ ಕೊಡುಗೆ ಏನು ತಿಳಿಸಿ..?
ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ರಾಜ್ಯದ 28 ಕ್ಷೇತ್ರದಲ್ಲೇ ಅತ್ಯಂತ ಚೆನ್ನಾಗಿ ಕೆಲಸ ಮಾಡಿರುವುದು ಸಂಸದ ಡಿ.ಕೆ. ಸುರೇಶ್. ಇದಕ್ಕೆ ಬೇಕಿದ್ರೆ ದಾಖಲೆಗಳಿದೆ. ಆದರೆ, ಇಲ್ಲಿ ಅಧಿಕಾರ ಅನುಭವಿಸಿದವರು ಏನು ಮಾಡಿದ್ದಾರೆ..? ಬಿಜೆಪಿಯವರಿಗೂ ಅಧಿಕಾರ ಇತ್ತು, ದಳದವರಿಗೂ ಅಧಿಕಾರ ಇತ್ತು. ಈ ಜಿಲ್ಲೆಗೆ ನಿಮ್ಮ ಕೊಡುಗೆ ಏನು ತಿಳಿಸಿ..? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.