ಹಾವೇರಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ-ಮಕ್ಕಳ ಜೊತೆಗೆ ನಾನು ರಾಜಿಯಾಗಬೇಕಾ..? ನನಗೆ ರಾಜಿ ಅವಶ್ಯಕತೆ ಇಲ್ಲ. ಬಿ.ವೈ. ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ ಎಂದು ಮತ್ತೆ ಗುಡುಗಿದ್ದಾರೆ.
ಬಿ.ವೈ. ವಿಜಯೇಂದ್ರ ಜತೆ ನನ್ನದು ಯಾವುದೇ ವ್ಯವಹಾರವಿಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗಬೇಕಷ್ಟೇ. ವಿಜಯೇಂದ್ರ ಅವರ ಉದ್ದೇಶ ಏನು..? ಮಾಜಿ ಸಚಿವ ವಿ. ಸೋಮಣ್ಣ ಅವರ ಮೇಲೆ ಏನು ಮಾಡಿದ್ದಾರೆ..? ವಿಜಯಪುರದಲ್ಲಿ ಏನು ಮಾಡಿದ್ದಾರೆ. ಎಲ್ಲಾ ನನಗೆ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಎಲ್ಲಾ ಹೇಳ್ತೀನಿ
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋಲಿಸುವುದಕ್ಕೆ ಏನು ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಹಣ ಕಳಿಸಿ ನಮ್ಮಿಬ್ಬರ ಸೋಲಿಗೆ ಕಾರಣರಾದ್ರು. ಇವರ ಎಲ್ಲಾ ಇತಿಹಾಸ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ ಹೇಳುತ್ತೇನೆ ಎಂದು ಮತ್ತೆ ಬಿಎಸ್ವೈ ಹಾಗೂ ವಿಜಯೇಂದ್ರ ಮೇಲೆ ಯತ್ನಾಳ್ ಅಟ್ಯಾಕ್ ಮಾಡಿದ್ದಾರೆ.
ಪ್ರತ್ಯೇಕ ದೇಶ ಕೇಳೋದು ದೇಶ ದ್ರೋಹದ ಕೆಲಸ
ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿ.ಕೆ. ಸುರೇಶ್ ಹೇಳಿಕೆ ವಿಚಾರಚವಾಗಿ ಮಾತನಾಡಿ, ಹಿಂದೆ ದಿವಂಗತ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಕೇಳಿದ್ರು. ಪ್ರತ್ಯೇಕ ದೇಶ ಕೇಳೋದು ದೇಶ ದ್ರೋಹದ ಕೆಲಸ. ಹೆಗಡೆವಾರ್ ಕೂಡ ಕಾಂಗ್ರೆಸ್ ಹೋರಾಟದಲ್ಲಿದ್ದರು. ಅವರು ವಿದೇಶಿ ಹೆಣ್ಣಿರುವ ಸಂಘಟನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.