ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯ ಫೋಟೊಗಳನ್ನು ಶಿಲ್ಪಿ ಅರುಣ್ ಯೋಗಿರಾಜ್ ಇಂದು ಬಹಿರಂಗ ಪಡಿಸಿದ್ದಾರೆ.
ಈ ಕುರಿತು ಶಿಲ್ಪಿ ಅರುಣ್ ಯೋಗಿರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಯೋಚಿಸಿದೆ. ಇದರಲ್ಲಿ ನಾನು ರಾಮ ಲಲ್ಲಾನ ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ ಎಂದು ಬರೆದಿದುಕೊಂಡಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ನೇತ್ರೋನ್ಮಿಲನ ಮಾಡಲೆಂದೇ ಒಂದು ಮುಹೂರ್ತ ನೀಡಿದ್ದರು. ಆ ಮುಹೂರ್ತದಲ್ಲೇ ಬೆಳ್ಳಿಯ ಸುತ್ತಿಗೆ ಮತ್ತು ಚಿನ್ನದ ಉಳಿಯನ್ನು ಬಳಸಿ ಕಣ್ಣನ್ನು ಕೆತ್ತಿದ್ದೆ ಎಂದು ವಿವರಿಸಿದರು.
ರಾಮ ದೇಹವನ್ನು ಎಲ್ಲಾ ಕೆತ್ತಿದ್ದರೂ ಕಣ್ಣು ಕೆತ್ತಲು ಬಹಳ ಭಯವಾಗಿತ್ತು. ಯಾಕೆಂದರೆ ಮಗುವಿನ ಕಣ್ಣು ಕೆತ್ತುವುದು ಬಹಳ ಸವಾಲಿನ ಕೆಲಸ. ಇದಕ್ಕಾಗಿ ಮೈಸೂರಿನಲ್ಲಿ ನಡೆದ ಚಿಣ್ಣರ ಮೇಳದಲ್ಲಿ ಬಹಳಷ್ಟು ಸಮಯ ಕಳೆದಿದ್ದೆ. ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಪುಟಾಣಿ ಮಕ್ಕಳು ಕೃಷ್ಣ ವೇಷ ಧರಿಸಿದ ಫೋಟೋ ನೋಡಿ ನನಗೆ ಒಂದು ಕಲ್ಪನೆ ಬಂತು. ಈ ಕಲ್ಪನೆಯನ್ನು ಆಧಾರಿಸಿ ನಾನು ಮುಖ, ಕಣ್ಣನ್ನು ಕೆತ್ತಿದೆ ಎಂದು ವಿವರಿಸಿದ್ದರು.