ಬೆಂಗಳೂರು : ಭ್ರಷ್ಟಾಚಾರದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರ್ಕಾರದಲ್ಲೂ ಶೇ.40 ಕಮಿಷನ್ ಮುಂದುವರೆದಿದೆ ಎಂದು ಹೇಳಿರುವುದು ಆಘಾತಕಾರಿ ಸಂಗತಿ. ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, ಹೋರಾಟ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅದನ್ನೇ ಮಾಡುತ್ತಿದೆ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಪೇಸಿಎಂ ಎನ್ನುವ ಅಭಿಯಾನ ಮಾಡಿದ್ದ ಕಾಂಗ್ರೆಸ್, ಚುನಾವಣೆಗೆ ಮುನ್ನ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಸಿಕ್ಕ ಬಳಿಕ ಮಾಡುತ್ತಿರುವುದೇನು? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಸೇರಿ ಮತ್ತಿಬ್ಬರಿಗೆ ಭಾರತ ರತ್ನ ಘೋಷಣೆ!
ಗುರುವಾರ ಚಾಮರಾಜಪೇಟೆಯ ಗುತ್ತಿಗೆದಾರರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿಯೂ ಭ್ರಷ್ಟ ಅಧಿಕಾರಿಗಳು ಇದ್ದಾರೆಂದು ಹೇಳಿದ್ದಾರೆ. ಹೀಗಾದರೆ ಅಭಿವೃದ್ಧಿ ಕಾರ್ಯಗಳು ನಡೆಯುವುದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ತಾನು ಭ್ರಷ್ಟಾಚಾರ ವಿರೋಧಿ ಎನ್ನುವ ಸಿದ್ದರಾಮಯ್ಯ ಅವರು ಇದರ ಬಗ್ಗೆ ಗಮನ ಹರಿಸಬೇಕು. ಕೂಡಲೇ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಲಿ. ಇದರಲ್ಲಿ ಭಾಗಿಯಾಗಿರುವ ಶಾಸಕ, ಸಚಿವರನ್ನು ವಜಾಗೊಳಿಸಿ ತಮ್ಮ ಸರ್ಕಾರ ಭ್ರಷ್ಟಾಚಾರ ವಿರೋಧಿ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಒತ್ತಾಯಿಸಿದರು.