Saturday, May 4, 2024

ಶಾಲಾ ಮಕ್ಕಳಿಗೆ ಸಿಹಿಸುದ್ದಿ: ವಾರದಲ್ಲಿ 3 ದಿನ ರಾಗಿಮಾಲ್ಟ್ ನೀಡಲು ತೀರ್ಮಾನ!

ಮೈಸೂರು : ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ, ಇದುವರೆಗೆ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಚಿಕ್ಕಿ ನೀಡಲಾಗುತ್ತಿತ್ತು, ಆರು ದಿನ ಕ್ಷೀರ ಭಾಗ್ಯ ಹಾಲು ನೀಡಲು ಕ್ರಮ ವಹಿಸಲಾಗಿತ್ತು,  ಇದೀಗ ಮೂರು ದಿನ ಹಾಲಿಗೆ ರಾಗಿಮಾಲ್ಟ್ ಮಿಕ್ಸ್ ಮಾಡಿ ನೀಡಲು ಕ್ರಮ ವಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಮಕ್ಕಳಿಗೆ ರಾಗಿ ಮಾಲ್ಟ್ ಮಿಕ್ಸ್ ನೀಡುವ ಸಂಬಂಧ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ)ಯಿಂದ ಪರೀಕ್ಷೆ ಮಾಡಿಸಲಾಗಿದ್ದು, ಮಕ್ಕಳಿಗೆ ನೀಡಬಹುದೆಂಬ ವರದಿ ಬಂದಿದೆ. ಹೀಗಾಗಿ, ಶೀಘ್ರದಲ್ಲೇ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲಾಗುವುದು ಎಂದರು.

ಇದನ್ನೂ ಓದಿ: Janaspandana: ಇಂದು ವಿಧಾನಸೌಧದಲ್ಲಿ ಜನಸ್ಪಂದನ ಕಾರ್ಯಕ್ರಮ

ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ನವೆಂಬರ್‌ನಿಂದ ಪೂರೈಸಲಾಗುತ್ತಿದೆ. ಇದರಿಂದ ಶಾಲೆಗಳಲ್ಲಿ ಮುಕ್ತವಾಗಿ ಎಲ್ಲಾ ವ್ಯವಸ್ಥೆ ಬಳಸಿಕೊಳ್ಳಬಹುದು. ಎಷ್ಟೋ ಶಾಲೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದ ಮೇಲೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅನುಕೂಲವಾಗಿದೆ. ಎಷ್ಟೋ ಶಾಲೆಗಳು ವಿದ್ಯುತ್ ಬಿಲ್‌ಗೆ ಹೆದರಿ ಕಂಪ್ಯೂಟರ್ ಬಳಸುತ್ತಿಲ್ಲ. ಆದರೆ, ಈಗ ಕಂಪ್ಯೂಟರ್ ಬಳಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರುತ್ತೇವೆ. ಒಮ್ಮೆ ಫೇಲಾದ ನಂತರ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸಾಗುವವರಿಗೆ ಮಾರ್ಕ್ಸ್ ಕಾರ್ಡ್ ನೀಡುವಾಗ ಸಪ್ಲಿಮೆಂಟರಿ ಎಂದು ನಮೂದಿಸುವುದಿಲ್ಲ. ಮಕ್ಕಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲಾಗುತ್ತದೆ. ಸರ್ಕಾರಿ ಶಾಲೆಗಳನ್ನು ಉನ್ನತೀಕರಣ ಮಾಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

500 ಶಾಲೆಗಳು ಮೇಲ್ದರ್ಜೆಗೆ: ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ 300 ಶಾಲೆಗಳಿದ್ದು, ಮುಂದಿನ ವರ್ಷ ಸಿಎಸ್ಆರ್ ಅನುದಾನದಲ್ಲಿ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ಹಾಗೆಯೇ, ರಾಜ್ಯದಲ್ಲಿ 6 ಸಾವಿರ ಗ್ರಾಪಂಗಳಿದ್ದು, ಮುಂದಿನ 3 ವರ್ಷಗಳಲ್ಲಿ ಎರಡು ಗ್ರಾಪಂಗಳಿಗೆ ಒಂದರಂತೆ ಒಟ್ಟು 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

RELATED ARTICLES

Related Articles

TRENDING ARTICLES