Thursday, November 21, 2024

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ!

ಬೆಂಗಳೂರು: ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಹಂಚಿಕೆಯಾಗಬೇಕಿರುವ ತೆರಿಗೆಯಲ್ಲಿ ಕಡಿಮೆಯಾಗಲು ನೇರವಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಅವರೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ರಾಜ್ಯಕ್ಕೆ ಕೇಂದ್ರದಿಂದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದ್ದು ರಾಜ್ಯದ ಸಚಿವರು, ಶಾಸಕರು ಹಾಗು ಮುಖಂಡರ ಸಮೇತವಾಗಿ ಫೆ.7 ರಂದು ದೆಹಲಿಯ ಜಂತರ್​ ಮಂತರ್​ ನಲ್ಲಿ ಪ್ರತಿಭಟನೆ ನಡೆಸುವ ತೀರ್ಮಾನಿಸಿರುವ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಯಡಿಯೂರಪ್ಪ, ಬೊಮ್ಮಾಯಿಯವರು ಪ್ರಧಾನಿಗಳ ಮುಂದೆ ಬಾಯಿ ಬಿಡುವುದಿಲ್ಲ. ವಿರೋಧಪಕ್ಷದ ನಾಯಕ ಆರ್.ಅಶೋಕ್ ಗೆ ಈ ವಿಷಯಗಳೆಲ್ಲಾ ಅರ್ಥವೇ ಆಗಲ್ಲ. ಪ್ರಹ್ಲಾದ್ ಜೋಷಿ ಮತ್ತು ಶೋಭಾ ಕರಂದ್ಲಾಜೆ ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿದ್ದಾರೆ. 27 ಜನ ಸಂಸದರು ಸಂಸತ್ತಿನಲ್ಲಿ ಮಾತೇ ಆಡಿಲ್ಲ. ಜನ ಇವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇವರು ರಾಜ್ಯದ ಪರವಾಗಿ ಪಾರ್ಲಿಮೆಂಟಲ್ಲಿ ಬಾಯಿಯನ್ನೇ ಬಿಡುತ್ತಿಲ್ಲ. 11 ಸಾವಿರ ಕೋಟಿ ಕೇಂದ್ರ ಹಣಕಾಸು ಸಚಿವರಿಂದಲೇ ತಿರಸ್ಕಾರವಾಗಿದೆ. ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ ಎಂದರು.

ಇದನ್ನೂ ಓದಿ: ಘಾಟಿ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ: 55 ಲಕ್ಷಕ್ಕು ಅಧಿಕ ಹಣ ಸಂಗ್ರಹ!

ಚಿನ್ನದ ಮೊಟ್ಟೆ ಇಡುವ ಕೋಳಿ ಕತ್ತು ಕುಯ್ಯಬಾರದು:

ಕೇಂದ್ರ ಸರ್ಕಾರ 2021 ರಲ್ಲಿ ಪ್ರವಾಹ ಬಂದಾಗಲೂ ಅಗತ್ಯ ಹಣ ಕೊಟ್ಟಿಲ್ಲ. ಪರಿಹಾರ ಹಂಚಿಕೆ ಮಾಡುವಾಗ 6 ಮಾನದಂಡಗಳಾದ ಜನಸಂಖ್ಯೆ, ವಿಸ್ತೀರ್ಣ, ವರಮಾನದ ಅಂತರ, ಅರಣ್ಯ ಪ್ರದೇಶ, ತೆರಿಗೆ ಹಣಕಾಸಿನ ಪರಿಸ್ಥಿತಿಗಳನ್ನು ಪರಿಗಣಿಸುತ್ತಾರೆ. ಈ ಮಾನದಂಡಗಳ ಪ್ರಕಾರವೂ ನಮಗೆ ಪರಿಹಾರದ ಹಣ ಬಂದಿಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಬಾರದು. ಪತ್ರ ಬರೆದರೆ ಉತ್ತರ ಕೊಡದೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಮಂತ್ರಿಗಳಿಗೆ ಭೇಟಿಗೆ ಅವಕಾಶವಿಲ್ಲದಿರುವುದು, ಬರಗಾಲಕ್ಕೆ ಹಣಕಾಸು ಬಿಡುಗಡೆ ಮಾಡದಿರುವುದು, ಹಂಚಿಕೆಯಲ್ಲಿ ಅನ್ಯಾಯವಾಗಿರುವುದು ನೋಡಿದರೆ ಇದು ಒಕ್ಕೂಟ ವ್ಯವಸ್ಥೆಯ ಅಪಮಾನ ಅಲ್ಲವೇ ಎಂದು ಪ್ರಶ್ನಿಸುತ್ತಿದ್ದೇವೆ. ಉತ್ತರ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಸರಿಪಡಿಸಿ. ಚಿನ್ನದ ಮೊಟ್ಟೆ ಇಡುವ ಕೋಳಿ ಕತ್ತು ಕುಯ್ಯಬಾರದು, ಹಾಲು ಕೊಡುವ ಕೆಚ್ಚಲನ್ನೇ ಕತ್ತರಿಸಬಾರದು ಎನ್ನುವುದು ನಮ್ಮ ಮನವಿ. ನಮ್ಮ ನಿರಂತರ ಬೇಡಿಕೆ, ಮನವಿಗಳಿಗೂ ಕೇಂದ್ರ ಬೆಲೆ ಕೊಟ್ಟಿಲ್ಲ ಎಂದರು.

ಪ್ರತಿಭಟನೆಗೆ ಪ್ರತಿಪಕ್ಷದವರಿಗೂ ಕರೆ:

ಬಿಜೆಪಿ ಶಾಸಕರು, ಸಂಸದರು, ನಾಯಕರಿಗೂ ನಾವು ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಾವು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ. ನೀವೂ ರಾಜ್ಯದ ಜನರ ಧ್ವನಿಯಾಗಿ, ರಾಜ್ಯದ ಜನರ ಪರವಾಗಿ ನಿಲ್ಲಿ ಎಂದು ಬಿಜೆಪಿ ಯವರಿಗೆ ಕರೆ ಕೊಡುತ್ತೇವೆ. ಕನ್ನಡಿಗರಿಗೆ ದ್ರೋಹ ಮಾಡಬೇಡಿ , ಬನ್ನಿ ರಾಜ್ಯದ ಪರವಾಗಿ ಧ್ವನಿ ಎತ್ತೋಣ ಎಂದು ಕರೆಯುತ್ತಿದ್ದೇವೆ. ಪ್ರತಿಭಟಿಸದಿದ್ದರೆ ಕನ್ನಡಿಗರಿಗೆ ದ್ರೋಹ ಉಂಟಾಗಲಿದೆ ಎಂದರು

ಆಶಾಭಾವನೆ ಇದೆ:

ಧರಣಿ ಮಾಡಿದರೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆಯೇ ಎಂಬ ಪ್ರಶ್ನೆಗೆ ನರೇಂದ್ರ ಮೋದಿಯವರು ಸೂಕ್ಷ್ಮ ಇದ್ದಾರೆ, ಪ್ರತಿಭಟನೆ ಬಳಿಕವಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿ ಪಡಿಸಿ ಕರ್ನಾಟಕದ ಪಾಲಿನ ಹಣವನ್ನು ವಾಪಾಸ್ ಕೊಡಬಹುದು ಎಂಬ ಆಶಾಭಾವನೆ ಇದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಹಣ ಹೋಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಟೀಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ಇದು ಶುದ್ದ ತಪ್ಪು ಎಂದರು.

ಬರಲಿರುವ ಅಧಿವೇಶನದಲ್ಲಿ ಶ್ವೇತ ಪತ್ರ ಹೊರಡಿಸಲು ರಾಜ್ಯ ಸರ್ಕಾರದ ಚಿಂತನೆ ಸರ್ಕಾರ ನಡೆಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಇಲಾಖೆ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES