ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಭೇಟಿ ಬಗ್ಗೆ ಲಘುವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ಕೊಟ್ಟಿರುವ ಜೆಡಿಎಸ್, ಆ ಪಕ್ಷವನ್ನು ಗೊಸುಂಬೆ, ಊಸರವಳ್ಳಿ ಎಂದು ಜರೆದಿದೆ.
ಗೊಸುಂಬೆ ಉರುಫ್ ಊಸರವಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ. ಈ ದೇಶದಲ್ಲಿ ಯಾವುದಾದರೂ ಛದ್ಮವೇಷದಾರಿ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕುಮಾರಸ್ವಾಮಿ ಅವರು ಹಾಗಲ್ಲ. ಏನಾದರೂ ಹೇಳಬೇಕೆಂದರೆ, ನೇರ, ದಿಟ್ಟ, ನಿಷ್ಠುರ. ಏನೇ ಬಂದರೂ ಎದುರಿಸುವ ಕೆಚ್ಚು ಅವರದ್ದು, ಪಲಾಯನ ಮಾಡುವ ಪೈಕಿ ಅವರಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.
RSS ಬಗ್ಗೆ ಕುಮಾರಸ್ವಾಮಿ ಅವರು ಹಿಂದೆ ಮಾತನಾಡಿದ್ದಾರೆ, ಬರೆದಿದ್ದಾರೆ. ನಿಜ. ಟೀಕೆ ಮಾಡಿದ್ದಾರೆನ್ನುವುದೂ ಹೌದು. ಹಾಗೆಯೇ, ಕಲ್ಲಡ್ಕ ಪ್ರಭಾಕರ ಭಟ್ಟರು ನಡೆಸುತ್ತಿರುವ ಶ್ರೀರಾಮ ವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಅವರು ಏನು ಹೇಳಬೇಕೋ ಅದನ್ನೇ ಹೇಳಿದ್ದಾರೆ. ಕಾಮಾಲೆ ಕಣ್ಣಿನ, ಕುತ್ಸಿತ ಕಿವಿಯ ಕಾಂಗ್ರೆಸ್ ಗೆ ಅದೆಲ್ಲಾ ಗೊತ್ತಾಗುವುದೇ ಇಲ್ಲ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: BigBoss ಟ್ರೋಫಿ ಸಿಗದಿರಬಹುದು, ನಿಮ್ಮ ಪ್ರೀತಿಯ ಗೆಲುವನ್ನು ತಂದುಕೊಟ್ಟಿದೆ: ಸಂಗೀತ ಶೃಂಗೇರಿ!
ಪ್ರಭಾಕರ ಭಟ್ಟರ ಶಾಲೆಯಲ್ಲಿ, ನಿನ್ನೆ ದಿನ ಮಂಡ್ಯದಲ್ಲಿ ಕುಮಾರಸ್ವಾಮಿ ಅವರು ಮಾಡಿರುವ ಭಾಷಣಗಳನ್ನು ಕಾಂಗ್ರೆಸ್ಸಿಗರು ಕೇಳಲಿ. ಕೊಳೆತು ನಾರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕೊಚ್ಚೆಯೇ ಸಹ್ಯವಾಗಿದೆಯೇ ಹೊರತು ಸತ್ಯವಲ್ಲ. ಶ್ರೀ ವೀರೇಂದ್ರ ಪಾಟೀಲರ ಕಾಲದಲ್ಲಿ (1989) ಚನ್ನಪಟ್ಟಣ, ರಾಮನಗರದಲ್ಲಿ ಬೆಂಕಿ ಹಾಕಿ ರಾಜಕೀಯ ಬೇಳೆ ಬೇಯಿಸಿಕೊಂಡ ಗಿರಾಕಿಗಳು ನೀವು? ಹಿರಿಯರಾದ ವೀರೇಂದ್ರ ಪಾಟೀಲರ ಜೀವಕ್ಕೆ ಕ್ಷೋಭೆ ಕೊಟ್ಟ ಆಸಾಮಿಗಳೂ ನೀವೇ? ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದಿದೆ ಜೆಡಿಎಸ್.
ಕೇಸರಿ ಬಗ್ಗೆ ಹೇಳಿದ್ದೀರಿ, ಸರಿ. ಅದು ನಮ್ಮ ಸಂಪ್ರದಾಯ, ಸಂಸ್ಕೃತಿಯ ಪ್ರತೀಕ. ನಮ್ಮ ನಂಬಿಕೆಯ ಹೆಗ್ಗುರುತು. ಸ್ವಧರ್ಮದ ಬಗ್ಗೆ ಗೌರವವೇ ಇಲ್ಲದವರಿಗೆ, ಓಲೈಕೆ ಮಾಡಿಕೊಂಡೇ ಒಲೆ ಉರಿಸಿಕೊಳ್ಳುವವರಿಗೆ ಆಚಾರ ವಿಚಾರಗಳ ಪಾವಿತ್ರ್ಯತೆ ಎಲ್ಲಿ ಗೊತ್ತಾಗಬೇಕು? ಕೊಳಕು ಮನಸ್ಸಿನವರಿಗೆ ಕೇಸರಿಯೂ ರಾಜಕೀಯದ ಸರಕು!! ಎಂದು ಜೆಡಿಎಸ್ ಪಕ್ಷವು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಕುಮಾರಸ್ವಾಮಿ ಅವರು RSS ಕಾಳಾಲೋ, ಸೇವಕರೋ ಎನ್ನುವುದು ಕಾಲವೇ ನಿರ್ಣಯಿಸುತ್ತದೆ. ಆದರೆ, ನಿಮ್ಮ ಸಿದ್ದಹಸ್ತನಂತೆ ಉಂಡ ಮನೆಗೆ ಎರಡು ಬಗೆಯುವ ಪೈಕಿ ಅವರಲ್ಲ. ಮಾತೃಭೂಮಿಯನ್ನು, ಪರಂಪರಾಗತ ಆಚಾರ-ವಿಚಾರ, ನಂಬಿಕೆಗಳಿಗೆ ಕೊಳ್ಳಿ ಇಟ್ಟು ಜಾತಿ-ಧರ್ಮಗಳ ನಡುವೆ ವಿಷಪ್ರಾಶನ ಮಾಡಿ, ಅದನ್ನೇ ಅಮಲೇರಿಸಿಕೊಳ್ಳುವ ಗತಿಗೆಟ್ಟ ಕಾಂಗ್ರೆಸ್ ಮನಸ್ಥಿತಿಗೆ ಆ ಹನುಮದೇವರೇ ಅಂತ್ಯ ಕಾಣಿಸುತ್ತಾನೆ. ಇದು ಸತ್ಯ.. ಸತ್ಯ ಎಂದು ಹೇಳಿದೆ ಜೆಡಿಎಸ್.