ಯಾದಗಿರಿ : ಕುಡಿಯುವ ನೀರಿಗಾಗಿ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಎಸ್. ಹೊಸಳ್ಳಿಯಲ್ಲಿ ನಡೆದಿದೆ.
ಹೊನಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಸ್. ಹೊಸಳ್ಳಿ ಗ್ರಾಮದಲ್ಲಿ ಏಕೈಕ ಕೊಳವೆ ಬಾವಿಯಿದ್ದು, ನಿತ್ಯವೂ ಮಹಿಳೆಯರು ಮುಗಿಬಿಳ್ತಾರೆ. ಕುಡಿಯುವ ನೀರಿಗಾಗಿ ನಿತ್ಯ ಮಹಿಳೆಯರು ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಎಸ್. ಹೊಸಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಹಲಗೆ ಮತ್ತು ಖಾಲಿ ಕೊಡಗಳನ್ನು ಹಿಡಿದು ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.
ಈ ವೇಳೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಮಾತನಾಡಿ, ಬಡವರು, ಕಾರ್ಮಿಕರು ದುಡಿಯಲು ಮುಂಜಾನೆ ತೆರಳಿ ಸಂಜೆಯೇ ಮನೆಗೆ ವಾಪಸ್ ಬರ್ತಾರೆ. ಆಗ ಕುಡಿಯುವ ನೀರಿಗಾಗಿ ಸಂಕಷ್ಟ ಪಡುವಂತಾಗಿದೆ. ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ಸಮಸ್ಯೆಯಿದ್ದು, ಬೇಸಿಗೆಯಲ್ಲಿ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆಯಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.