ಬೆಂಗಳೂರು: ಪ್ರವಾಸಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದ ಮಗುವೊಂದು ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿ ಗಂಭೀರ ಗಾಯಗೊಂಡಿರುವ ದಾರುಣ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಈ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತ್ರಿಧರ್ ಅಪಘಾತಕ್ಕೊಳಗಾದ ಮಗು. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಜಾಪುರ ಮೂಲದ ಕುಟುಂಬವೊಂದು ಬಂದಿತ್ತು.
ಇದನ್ನೂ ಓದಿ: ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ; ಇಮಾಮ್ ವಿರುದ್ಧ ಫತ್ವಾ!
ಝೂನ ರಸ್ತೆ ಬದಿಯಲ್ಲಿ ತ್ರಿಧರ್ ತನ್ನ ತಾಯಿ ಜತೆ ನಿಂತಿದ್ದ. ಎಂದಿನಂತೆ ಪ್ರವಾಸಿಗರನ್ನು ಕೂರಿಸಿಕೊಂಡು ಬ್ಯಾಟರಿ ಚಾಲಿತ ವಾಹನಗಳು ಸಂಚಾರ ಮಾಡುತ್ತಿದ್ದವು. ಆಟವಾಡುತ್ತಿದ್ದ ತ್ರಿಧರ್ ಬ್ಯಾಟರಿ ಚಾಲಿತ ವಾಹನವು ಬರುವಾಗಲೇ ಏಕಾಏಕಿ ರಸ್ತೆಗೆ ಓಡಿ ಬಂದಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿದ್ದ. ಕೂಡಲೇ ಚಕ್ರದಡಿ ಸಿಲುಕಿದ್ದ ಮಗುವನ್ನು ಅಲ್ಲಿದ್ದವರು ಹೊರತೆಗೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ತ್ರಿಧರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸದ್ಯ ರೈಂಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನವೇ ಬರಿಸುತ್ತಿದೆ.