Saturday, August 23, 2025
Google search engine
HomeUncategorizedರಾಷ್ಟ್ರಪತಿಗಳಿಗೆ ಏಕವಚನ ಬಳಕೆ: ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯಗೆ HDK ತೀವ್ರ ತರಾಟೆ

ರಾಷ್ಟ್ರಪತಿಗಳಿಗೆ ಏಕವಚನ ಬಳಕೆ: ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯಗೆ HDK ತೀವ್ರ ತರಾಟೆ

ಬೆಂಗಳೂರು : ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರಪತಿಗಳನ್ನು ವಿವೇಚನೆ ಇಲ್ಲದೆ ಏಕವಚನದಲ್ಲಿ ಸಂಬೋಧಿಸಿ, ಈಗ ವಿಷಾದ ವ್ಯಕ್ತಪಡಿಸಿದರೆ ಆಗುತ್ತದೆಯೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು; ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ ಸಿದ್ದರಾಮಯ್ಯನವರೇ. ಭಾವುಕನಾಗಿ ಮಾತನಾಡುವ ಭರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದೆ ಎಂದು ನೀವು ಕೊಟ್ಟಿರುವ ಸಮಜಾಯಿಷಿ ಮೊಸಳೆಯನ್ನೂ ನಾಚಿಸುವಂತಿದೆ ಎಂದಿದ್ದಾರೆ ಅಲ್ಲದೆ, ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಗ್ರಾಮೀಣ ಸೊಗಡಿನ ವ್ಯಕ್ತಿತ್ವ ನನ್ನದು. ನಾನು ಮಾತನಾಡುವುದೇ ಹಾಗೆ..” ಎಂದು ನೀವು ಸಮರ್ಥಿಸಿಕೊಳ್ಳುತ್ತಿರಿ. ಸಮರ್ಥನೆಗೂ ಒಂದು ಅಳತೆ, ಗೌರವ ಇರುತ್ತದೆ. ಅದಾವುದನ್ನೂ ನೀವು ಲೆಕ್ಕಕ್ಕೇ ಇಟ್ಟಿಲ. ಹೌದಲ್ಲವೇ? ಎಂದು ಸಿಎಂ ಅವರನ್ನು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ ಅವರು; 2ನೇ ಸಲ ಸಿಎಂ ಆಗಿ ಎಲ್ಲಾ ರೀತಿಯ ಶಿಷ್ಟಾಚಾರದ ಸುಖ ಅನುಭವಿಸುತ್ತಿದ್ದೀರಿ ಮತ್ತು ಪಾಲಿಸುತ್ತಿದ್ದೀರಿ, ಸರಿ. ಆದರೆ, ಭಾಷೆ ವಿಚಾರದಲ್ಲಿ ನೀವು ಯಾಕೆ ಶಿಷ್ಟಾಚಾರ ಕಲಿತಿಲ್ಲ, ಪಾಲಿಸುತ್ತಿಲ್ಲ? ನಿಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಏಕವಚನ ಪ್ರಯೋಗಿಸುವಿರಾ? ಈ ಸೋಗಲಾಡಿತನವನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರೇ ನಮ್ಮ ಜನರು ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರೇ, ಶೋಷಿತರ ಜಾಗೃತಿ ಸಮಾವೇಶದಲ್ಲಿ ನಿಮ್ಮ ಭಾಷಣದಲ್ಲಿ ಭಾವುಕತೆ, ಮುಗ್ಧತೆ ಇತ್ತೇ? ಸುಳ್ಳು ಹೇಳುವುದಕ್ಕೂ ಸಂಕೋಚ ಬೇಡವೇ? ನಿಮ್ಮ ಭಾಷಣ ದುರಾಹಂಕಾರದ ಪರಮಾವಧಿ ಮತ್ತು ಆ ಸಮಾವೇಶದ ಕರ್ತೃ,ಕರ್ಮ, ಕ್ರಿಯೆ ಎಲ್ಲವೂ ನೀವೇ. ಹೌದೋ ಅಲ್ಲವೋ? ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಬಗ್ಗೆ, ಅದರಲ್ಲೂ ಮಹಿಳೆಯ ಬಗ್ಗೆ ಏಕವಚನ ಪ್ರಯೋಗಿಸುವಾಗ ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ? ಅವರು ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.

ಎರಡು ಬಾರಿ ಸಿಎಂ ಆದವರು, ಡಿಸಿಎಂ, ಹಣಕಾಸು ಸಚಿವರೂ ಆಗಿದ್ದವರು. ವಕೀಲರೂ, ಸ್ವಯಂಘೋಷಿತ ಸಂವಿಧಾನ ತಜ್ಞರೂ ಆಗಿರುವ ನಿಮ್ಮಂತಹ ಪಂಡಿತರೇ ಭಾವುಕತೆಯಿಂದ ಬಾಯಿ ತಪ್ಪಿದರೆ ಹೇಗೆ?
ಇನ್ನು ಆ ನಿಮ್ಮ ಭಾಷಣ! ಅದನ್ನು ಭಾಷಣ ಎನ್ನಲು ಸಾಧ್ಯವೇ? ನಿಮ್ಮ ಭಾಷಣ ನಿಮ್ಮ ಹೃದಯದಲ್ಲಿ ತುಂಬಿದ್ದ ಅಸಹನೆಯ ನಂಜು. ಅನ್ಯಜಾತಿಗಳ ಮೇಲೆ ಮಡುಗಟ್ಟಿದ ದ್ವೇಷ. ಜಾತಿ-ಧರ್ಮಗಳ ನಡುವೆ ಬೆಂಕಿ ಇಡಲು ನೀವು ಕಕ್ಕಿದ ಕಾರ್ಕೋಟಕ ವಿಷಜ್ವಾಲೆ. ಜಾತಿ ವ್ಯವಸ್ಥೆ ಇರುವರೆಗೆ ಇಂಥ ಸಮಾವೇಶಗಳು ನಡೆಯಬೇಕು ಎನ್ನುತ್ತೀರಿ! ಅಂದರೆ ಕಾರ್ಕೋಟಕ ವಿಷಜ್ವಾಲೆ ನಿರಂತರ ಎಂದಾಯಿತು! ನಿರಂತರವಾಗಿ ಅಧಿಕಾರದಲ್ಲಿ ಸುಖಿಸಿದ ನೀವು ಶೋಷಿತ ವರ್ಗಕ್ಕೆ ಮಾಡಿದ್ದೇನು? ಎಂದು ಕುಮಾರಸ್ವಾಮಿ ಅವರು ಟಾಂಗ್ ನೀಡಿದ್ದಾರೆ.

ಮೀಸಲಾತಿ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೇನು? ಅವರ ನಿಲುವು ಏನಾಗಿತ್ತು? ಸಂವಿಧಾನವೇ ನನ್ನ ಧರ್ಮಗ್ರಂಥ ಎನ್ನುವ ನೀವು, ಇಷ್ಟು ಬೇಗ ಸಂವಿಧಾನ ಬರೆದವರ ಮಾತನ್ನೇ ಮರೆತರೆ ಹೇಗೆ? 14 ಬಜೆಟ್ ಮಂಡಿಸಿದ ಅಪರ ವಿತ್ತವಿಶಾರದರಾದ ತಮಗೆ ಮರೆವೇ? ಇನ್ನೆಷ್ಟು ವರ್ಷ ಸುಳ್ಳುಗಳನ್ನೇ ಹೇಳಿ ಸತ್ಯವನ್ನು ಸಾಗ ಹಾಕುತ್ತೀರಿ? ಎಂದು ಸಿಎಂಗೆ ಬಿಸಿ ಮುಟ್ಟಿಸಿದ್ದಾರೆ.

ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು, ಅವರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಏಕವಚನದಲ್ಲಿ‌ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದೀರಿ. ವಿಷಾದ ವ್ಯಕ್ತಪಡಿಸುವ ಸೌಜನ್ಯ ತೋರಿಸಿದ್ದೀರಿ, ಸಂತೋಷ. ಆದರೆ; ನಿಮ್ಮ ನಂಜಿನ ವಿಷ ರಾಜ್ಯವನ್ನೆಲ್ಲಾ, ದೇಶವನ್ನೆಲ್ಲಾ ವ್ಯಾಪಿಸುತ್ತಿದೆ. ಇದಕ್ಕೆ ಏನಂತೀರಿ? ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Previous article
Next article
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments