ಚಾಮರಾಜನಗರ : ಅಲ್ಲಿ ಯಾವ ಕಾಲದಿಂದ ಹನುಮ ಧ್ವಜ ಇತ್ತು..? ಎಷ್ಟು ವರ್ಷದಿಂದ ಇತ್ತು..? ಎಷ್ಟು ದಿವಸದಿಂದ ಇತ್ತು..? ಮೊದಲು ಇದಕ್ಕೆ ಬಿಜೆಪಿಯವರು ಉತ್ತರ ನೀಡಲಿ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ವಾಗ್ದಾಳಿ ನಡೆಸಿದರು.
ಮಂಡ್ಯದ ಕೆರೆಗೋಡುನಲ್ಲಿ ಹನುಮಧ್ವಜ ತೆರವು ವಿಚಾರವಾಗಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ರಾಮನ ಪೂಜೆ ಮಾಡೋ ದಿವಸ ಧ್ವಜ ನೆಟ್ಟು ಈಗ ಅಲ್ಲೇ ಇರಬೇಕು ಅಂದ್ರೆ ಹೆಂಗಾಗುತ್ತೆ..? ಪೂಜೆ ಮಾಡಿದ ಮೇಲೆ ತೆಗೀಬೇಕಲ್ವಾ..? ಸುಮ್ಮನೆ ಧ್ವಜ ನೆಟ್ಟುಬಿಟ್ಟು ಇಲ್ಲೇ ದೇವಸ್ಥಾನ ಇತ್ತು ಅಂದ್ರೆ ಬಿಟ್ಕೊಡಕ್ಕಾಗುತ್ತಾ..? ಎಂದು ಪ್ರಶ್ನಿಸಿದರು.
ಹಿಂದೂ ವಿರೋಧಿ ಅಂತ ಪಟ್ಟ
ಬಿಜೆಪಿಯರು ವಿವಾದ ಮಾಡ್ತಿದ್ದಾರೆ. ಅವರಿಗೆ ಬುದ್ದಿ ಇಲ್ಲದೆ ಇದೆಲ್ಲಾ ಮಾಡ್ತಾ ಇದ್ದಾರೆ. ಸಣ್ಣ ಪುಟ್ಟದ್ದನ್ನೆಲ್ಲಾ ದೊಡ್ಡದು ಮಾಡ್ತಾ ಇದ್ದಾರೆ. ಇದು ಗಲಾಟೆ ಮಾಡೋ ವಿಚಾರನೇ ಅಲ್ಲ. ಕಾಂಗ್ರೆಸ್ ಹಿಂದೂ ವಿರೋಧಿ ಅಂತ ಪಟ್ಟ ಕಟ್ಟಲು ಬಿಜೆಪಿ ಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.
ನಾವೂ ಹಿಂದೂಗಳೇ ಅಲ್ವಾ..?
ನಾವೂ ಹಿಂದೂಗಳೇ ಅಲ್ವಾ..? ರಾಮನನ್ನೂ ಪೂಜೆ ಮಾಡ್ತೀವಿ. ಈಶ್ವರ, ಹನುಮ, ದೊಡ್ಡಮ್ಮ, ಚಿಕ್ಕಮ್ಮ, ತಾಯಮ್ಮ ಎಲ್ಲರನ್ನೂ ಪೂಜೆ ಮಾಡ್ತೀವಿ. ಬಿಜೆಪಿಯವರು ಸುಮ್ಮನೆ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಅಲ್ಲಿ ಹನುಮಧ್ವಜ ಯಾವಾಗಿಂದ ಇದೆ ಅಂತ ಅವರು ಮೊದಲು ಉತ್ತರ ಕೊಡಲಿ ಎಂದು ಸಚಿವ ಕೆ. ವೆಂಕಟೇಶ್ ಹರಿಹಾಯ್ದರು.