ಹಾವೇರಿ : ಮಂಡ್ಯದಲ್ಲಿ ಹನುಮ ಧ್ವಜ ಕಿತ್ತು ಹಾಕಿರುವ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕಾನೂನು ಬಾಹಿರ ಚಟುವಟಿಕೆ ಮಾಡುವವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಹನುಮ ಧ್ವಜ ಹಾರಿಸಿರುವುದನ್ನು ಪೊಲಿಸ್ ಅಧಿಕಾರಿಗಳ ಮೂಲಕ ಕಿತ್ತು ಹಾಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅಂತ ಪದೇ ಪದೇ ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದರು.
ರಾಮ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಹಲವು ಕಡೆ ಅಡೆ ತಡೆ ಆಗಿವೆ, ಕೆಲವು ಜನರನ್ನು ಅರೆಸ್ಟ್ ಮಾಡಿದ್ದಾರೆ. ಎಲ್ಲಾ ಕಡೆ ಸಮಸ್ಯೆ ಆಗುತ್ತಿದೆ. ಕಾನೂನು ಬಾಹೀರ ಚಟುವಟಿಕೆ ಮಾಡುವವರಿಗೆ ರಕ್ಷಣೆ ಕೊಡುತ್ತಿದ್ದಾರೆ. ಸರ್ಕಾರದ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಭಾರತ ದೇಶದ ಧ್ವಜ ಬಿಟ್ಟು ಭಾಗವಧ್ವಜ ಹಾರಿಸಿದ್ದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ
ದಲಿತ ಮಹಿಳೆ ಮೇಲೆ , ಅಲ್ಪ ಸಂಖ್ಯಾತ ಮಹಿಳೆ ಮೇಲೆ ದೌರ್ಜನ್ಯ ಆದರೂ ಯಾವುದೇ ಕ್ರಮ ಆಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳು ಶೇ 30% ರಷ್ಟು ಹೆಚ್ಚಳ ಆಗಿದೆ. ಕಾನೂನು ಕೈಗೆತ್ತಿಕೊಂಡವರು ನಿರ್ಭಿಡೆಯಿಂದ ವ್ಯವಹಾರ ಮಾಡುತ್ತಿದ್ದಾರೆ. ಬಿಹಾರ್ ತರ ಜಂಗಲ್ ರಾಜ್ ನಮ್ಮ ರಾಜ್ಯದಲ್ಲಿಯೂ ಉಂಟಾಗಿದೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇವರು ಎಸ್ ಐ ಟಿ ರಚನೆ ಮಾಡಲಿಲ್ಲ ಹೀಗಾಗಿ ನಾವೇ ಒಂದು ಪಿ.ಐ.ಎಲ್ ಹಾಕುತ್ತೇವೆ ಎಂದು ಹೇಳಿದರು.
ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ ?
ಇನ್ನು ಚಿತ್ರದುರ್ಗದಲ್ಲಿ ಸರ್ಕಾರದಿಂದ ಹಿಂದುಳಿದ ವರ್ಗಗಳ ಸಮಾವೇಶ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಹಿಂದ ವರ್ಗಗಳನ್ನೇ ಮೆಟ್ಟಿಲು ಮಾಡಿಕೊಂಡು ಸಿದ್ದರಾಮಯ್ಯ ಎರಡು ಸಲ ಸಿಎಂ ಆದರು ಅಹಿಂದ ಸಮುದಾಯಗಳಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗ, ಎಸ್ ಸಿ, ಎಸ್ ಟಿ, ಜನಾಂಗಕ್ಕೆ ಏನು ಮಾಡಿದ್ದೀರಾ? ದಲಿತರಿಗೆ ಮೀಸಲಿಟ್ಟ 11,300 ಕೋಟಿ ರೂಪಾಯಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ದಲಿತರ ಹಣ ಡೈವರ್ಟ್ ಯಾಕೆ ಮಾಡಿದ್ದೀರಿ ? ದಲಿತರು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಲಿತರಿಗೆ ನ್ಯಾಯ ವದಗಿಸಿದ್ದೇ ನಾವು. ನಾನು ಆಡಳಿತ ನಡೆಸುವಾಗ ದಲಿತರಿಗೆ ಯೋಜನೆಗಳನ್ನು ತಂದರೆ ಚುನಾವಣೆ ಸ್ಟಂಟ್ ಅಂದರು. ಆದರೆ, ನಾವು ಎಸ್ ಸಿ, ಎಸ್ ಟಿ ಜನಾಂಗಗಳಿಗೆ ನ್ಯಾಯ ಒದಗಿಸಿದ್ದೇವೆ. ಶಿಕ್ಷಣ, ಉದ್ಯೋಗದಲ್ಲಿ ನಮ್ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಈಗ ಅವರ ಸರ್ಕಾರ ಇದೆ, ಅವರು ಸಮಾವೇಶ ಮಾಡುತ್ತಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪಡೆದ ಲಾಭ ಈಗ ಪಡೆಯಲು ಆಗುವುದಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಜನಾರ್ದನ್ ರೆಡ್ಡಿ ಬಿಜೆಪಿಗೆ ಬೆಂಬಲ ವ್ಯಕ್ರಪಿಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಜನಾರ್ದನರೆಡ್ಡಿ ಮೊದಲು ಬಿಜೆಪಿಯಲ್ಲಿ ಇದ್ದವರು, ಸಹಜವಾಗಿಯೇ ಅವರು ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತು ಹೇಳಿರುತ್ತಾರೆ ಎಂದರು.
ಆಕಾಂಕ್ಷಿಯಲ್ಲ:
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಲೋಕಸಭಾ ಚುನಾವಣೆ ಟಿಕೇಟ್ ಆಕಾಂಕ್ಷಿ ಅಲ್ಲ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಅಪೇಕ್ಷಿತ ಅಲ್ಲ ಎಂದು ಸ್ಪಷ್ಟಪಡಿಸಿದರು.