ಮಂಡ್ಯ: ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನೆಡಲಾಗಿದ್ದ ಕೇಸರಿ ಬಣ್ಣದ ಹನುಮ ಧ್ವಜವನ್ನು ತೆರುವು ಮಾಡಲು ಬಂದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಅಧಿಕಾರಿಗಳು ಭಾನುವಾರ ಮುಂಜಾನೆ 3 ಗಂಟೆ ವೇಳೆಗೆ ಗ್ರಾಮಕ್ಕೆ ಆಗಮಿಸಿ ಧ್ವಜ ತೆರವಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಲಾಂಗ್ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!
ಮಂಡ್ಯ ಎಸಿ ಶಿವಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಧ್ವಜ ಇಳಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದ್ದು, ಧ್ವಜ ಕಂಬದ ಬಳಿಯೇ ಮಹಿಳೆಯರು ಹಾಗೂ ಯುವಕರು ಕುಳಿತಿದ್ದಾರೆ. ಅಲ್ಲದೇ ಕೆರೆಗೋಡು ಗ್ರಾಮಸ್ಥರಿಗೆ ಸಾಥ್ ನೀಡಲು ಹಲವು ಹಿಂದೂ ಸಂಘಟನೆಗಳು ಧಾವಿಸಿವೆ.
ಹನುಮನ ಧ್ವಜ ಉಳಿವಿಗಾಗಿ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ಹಿಂದೂ ಧರ್ಮದ ಪ್ರತೀಕ ಹನುಮ ಧ್ವಜ. ನಾವು ಧ್ವಜವನ್ನು ಯಾವುದೇ ಕಾರಣಕ್ಕೂ ಇಳಿಸಲ್ಲ. ರಾತ್ರಿ ಎಲ್ಲಾ ಊಟ, ನಿದ್ದೆ ಬಿಟ್ಟು ಹನುಮ ಧ್ವಜ ಕಾದಿದ್ದೇವೆ. ಕಾರಣವನ್ನು ಹೇಳದೆ ಧ್ವಜ ಇಳಿಸಲು ಬಂದಿದ್ದಾರೆ. ಹನುಮ ಧ್ವಜ ಇಳಿಸಲು ಬಂದವರಿಗೆ ಶಾಪ ತಟ್ಟದೇ ಬಿಡಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.