ಧಾರವಾಡ: ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಯಂದೇ ನಮ್ಮ ಮಗು ಜನನವಾಗಬೇಕು ಎಂದು ಧಾರವಾಡ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರು ವೈದ್ಯರ ಬಳಿ ಪಟ್ಟು ಹಿಡಿದಿದ್ದಾರೆ.
ಜನವರಿ 22, ಶ್ರೀರಾಮಭಕ್ತರಿಗೆ ಸುದಿನ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ರಾಮಲಲ್ಲಾ (ಬಾಲ ರಾಮ) ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ಪುಣ್ಯ ದಿನವೇ ನಮಗೆ ಹೆರಿಗೆ ಆಗಬೇಕು ಎಂದು ಅನೇಕ ಗರ್ಭಿಣಿಯರು ವೈದ್ಯರಲ್ಲಿ ಮನವಿ ಮಾಡಿದ್ದಾರೆ.
ಅಂದು ಹುಟ್ಟಿ ಬರುವವರು ಗಂಡಾದರೆ ರಾಮ, ಹೆಣ್ಣಾದರೆ ಸಾಕ್ಷಾತ್ ಸೀತೆಯೇ ಎಂದು ನಂಬಿದ್ದಾರೆ. ದೇವ – ದೇವತೆ ಹುಟ್ಟಿ ಬಂದರೆ ಜನ್ಮ ಪಾವನವಾಗುತ್ತದೆ ಎಂಬುದು ಅಳಿಸಲಾರದ ನಂಬಿಕೆಯಾಗಿದೆ.
ಜನವರಿಯಲ್ಲಿ ಹೆರಿಗೆ ಎಂದು ವೈದ್ಯರಿಂದ ದಿನಾಂಕ ಪಡೆದವರು,ಇಲ್ಲ 22ರಂದೇ ಹೆರಿಗೆ ಮಾಡಿಸಬೇಕು ಎಂದು ಡೇಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಪ್ರಸೂತಿ ತಜ್ಞರಿಗೆ ಏನಾದರೂ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ. ಮಗುವಿನ ಜನನಕ್ಕೆ ಇದಕ್ಕಿಂತ ಉತ್ತಮ ಸಮಯ ಮತ್ತೆಂದೂ ಬರುವುದಿಲ್ಲಎಂದು ಕೆಲವು ಮಹಿಳೆಯರು ಹೇಳುತ್ತಿದ್ದಾರೆ. ಹೀಗಾಗಿ ಜ.22ರಂದು ದೇಶದಲ್ಲಿ ಎಂದಿಗಿಂತಲೂ ಹೆಚ್ಚಿನ ಹೆರಿಗೆಯಾಗಬಹುದು ಎನ್ನಲಾಗಿದೆ.