ತುಮಕೂರು : ದಾಸೋಹ ದಿನ ಎಂದರೆ ಏನೆಂದು ನನಗೆ ಗೊತ್ತಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಾಸೋಹ ದಿನದ ಆಚರಣೆ ಸ್ವರೂಪ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಅಂದಿನ ಸರ್ಕಾರ ಘೋಷಣೆ ಮಾಡಿತ್ತು. ಸಿಎಂ ಸಿದ್ದರಾಮಯ್ಯ ಕೂಡ ದಾಸೋಹ ದಿನ ಎಂದು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೂ ದಾಸೋಹ ದಿನ ಎಂದರೆ ಏನು ಅಂತ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಸವಾದಿ ಶರಣರ ಆಶಯದಂತೆ ನಮ್ಮ ಸರ್ಕಾರ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದಕ್ಕಾಗಿ ವಾರ್ಷಿಕ 58 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಇವೆಲ್ಲವೂ ಸಮಸಮಾಜದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಕಾಂಗ್ರೆಸ್ ಸರ್ಕಾರ ಇಟ್ಟ ದಿಟ್ಟ ಹೆಜ್ಜೆಗಳಾಗಿವೆ ಎಂದು ತಿಳಿಸಿದ್ದಾರೆ.
ಜ.21ನ್ನು ‘ದಾಸೋಹ ದಿನ’ವೆಂದು ಘೋಷಿಸಿದ್ದ ಬಿಜೆಪಿ
ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ‘ದಾಸೋಹ ದಿನ’ ವನ್ನಾಗಿ ಆಚರಿಸಲು ಬಿಜೆಪಿ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಈ ಕುರಿತ ಆದೇಶವನ್ನು ಹೊರಡಿಸಲಾಗಿತ್ತು. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಲಿಂ. ಶಿವಕುಮಾರ ಸ್ವಾಮೀಜಿ ಅವರ ಅಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ ಜನವರಿ 21 ರಂದು ಸರ್ಕಾರದ ವತಿಯಿಂದ ದಾಸೋಹ ದಿನವೆಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.
ದಾಸೋಹ ದಿನ ಘೋಷಿಸುವಂತೆ ಭಕ್ತರ ಆಗ್ರಹ
ಇಂದು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂ. ಡಾ. ಶಿವಕುಮಾರ ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ. ಈ ದಿನವನ್ನು ದಾಸೋಹ ದಿನ ಎಂದು ಘೋಷಿಸಬೇಕು ಹಾಗೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬುದು ಅಸಂಖ್ಯಾತ ಭಕ್ತರ ಆಗ್ರಹ ಮಾಡಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರು, ದಾಸೋಹ ದಿನ ಎಂದರೆ ಏನೆಂದು ಗೊತ್ತಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.