ಬೆಳಗಾವಿ: ಜ.22ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶಾಸಕ ಅಭಯ್ ಪಾಟೀಲ್ ರಾಮ ಭಕ್ತರ ಕೈ ಮೇಲೆ ಉಚಿತವಾಗಿ ರಾಮನ ಪ್ರತಿಮೆ, ಜೈ ಶ್ರೀರಾಮ ಟ್ಯಾಟೋ(ಹಚ್ಚೆ) ತೆಗೆಯುವ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಅವರು, 10ಸಾವಿರಕ್ಕೂ ಅಧಿಕ ರಾಮನ ಭಕ್ತರಿಗೆ ಉಚಿತ ಟ್ಯಾಟೊ ಹಾಕಿಸುವ ಅಭಿಯಾನ ಕೈಗೊಂಡಿದ್ದೇವೆ. ಕನ್ನಡ, ಹಿಂದಿ, ಮರಾಠಿ ಭಾಷೆಯ ಶ್ರೀರಾಮನ ಭಾವಚಿತ್ರವಿರುವ ಹಚ್ಚೆ ಹಾಕಿಸಿಕೊಳ್ಳಬಹುದು.
ನಾವು ಬೆಳಗಾವಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಮೂರು ಕಡೆಗಳಲ್ಲಿ ಟ್ಯಾಟೊ ಕೇಂದ್ರ ಓಪನ್ ಮಾಡಲಾಗಿದೆ.
ಸುಮಾರು 10 ಸಾವಿರ ಜನರಿಗೆ ಟ್ಯಾಟೋ ಹಾಕಿಸುವ ಗುರಿ ಹೊಂದಲಾಗಿದೆ. ಜ. 21ರ ವರೆಗೆ ಆಸಕ್ತರು ಬಂದು ಟ್ಯಾಟೋ ಹಾಕಿಸಿಕೊಳ್ಳಬೇಕು.
ಇದನ್ನೂ ಓದಿ: ರಾಮಮಂದಿರ ಚಿತ್ರವುಳ್ಳ ಪೋಸ್ಟಲ್ ಸ್ಟಾಂಪ್ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ!
ಈಗಾಗಲೇ 3 ಸಾವಿರ ಜನರು ಟ್ಯಾಟೋ ತೆಗೆಸಿಕೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ.30ರಿಂದ 40 ಜನ ಟ್ಯಾಟೋ ತೆಗೆಯುವವರನ್ನು ನಿಯೋಜಿಸಲಾಗಿದೆ.
ಈಗ ಸಾಂಕೇತಿಕವಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜ. 17ರಿಂದ ನಗರದ ವಿವಿಧ ಕಡೆಗಳಲ್ಲಿ ಟ್ಯಾಟೋ ತೆಗೆಯಲಾಗುವುದು. ಆರ್‌ಪಿಡಿ ಕಾಲೇಜು, ಗೋಗಟೆ ಕಾಲೇಜು ಬಳಿ, ಹರಿ ಮಂದಿರ ಹತ್ತಿರ ಟ್ಯಾಟೋ ತೆಗೆಯಲಾಗುವುದು, ಹೊರ ರಾಜ್ಯದಿಂದಲೂ ಯುವಕ- ಯುವತಿಯರು ಹೆಸರು ನೋಂದಾ ಯಿಸುತ್ತಿದ್ದಾರೆ.
ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ
ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದ್ದು, ಮಹಿಳೆಯರೇ ಟ್ಯಾಟೋ ತೆಗೆಯಲಿದ್ದಾರೆ ಎಂದರು. ಇಡೀ ದೇಶವೇ ಎದುರು ನೋಡುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣದ ಕ್ಷಣವನ್ನು ವಿಶೇಷ ಹಾಗೂ ವಿನೂತನವಾಗಿ ಸಂಭ್ರಮಿಸಬೇಕು ಎಂಬ ಉದ್ದೇಶದಿಂದ ಶಾಶ್ವತವಾಗಿ ಉಳಿಯುವ ಈ ಟ್ಯಾಟೋ ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.