ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಎಸ್ಐಟಿ ಗೆ ವಹಿಸುವಂತೆ ಜನವರಿ 20 ಹಾವೇರಿ ಎಸ್ಪಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಹಾವೇರಿಯಲ್ಲಿ ನೈತಿಕ ಪೊಲಿಸ್ ಗಿರಿ ಮಾಡಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವನ್ನು ಪೊಲಿಸರು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಹಾವೇರಿ ಎಸ್ಪಿ, ಹೊಮ್‌ಮಿನಿಸ್ಟರ್ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಆದರೆ, ಈಗ ಹಾನಗಲ್ ಪೊಲಿಸರನ್ನು ಅವರೇ ಅಮಾನತು ಮಾಡಿದ್ದಾರೆ. ಹೀಗಾಗಿ ಪೊಲಿಸರಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರಾಮಮಂದಿರ ಚಿತ್ರವುಳ್ಳ ಪೋಸ್ಟಲ್ ಸ್ಟಾಂಪ್ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ!
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಕಾಪಾಡುವಲ್ಲಿ ರಾಜಕಾರಣ ಬಹಳ ಪಾತ್ರ ವಹಿಸುತ್ತಿದೆ. ಹಾನಗಲ್ ಪೊಲಿಸರು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಆ ಹೆಣ್ಣು ಮಗಳಿಗೆ ಸರಿಯಾದ ಚಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ಸಿಎಂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಎಸ್ ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಜನವರಿ 20 ರಂದು ಹಾವೇರಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಿಎಂ ಎಸ್ ಐಟಿ ತನಿಖೆಗೆ ನಿರಾಕರಿಸಿರುವುದು ಅಪರಾಧ ಮಾಡುವವರಿಗೆ ಪುಷ್ಟಿ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.