Thursday, November 21, 2024

ಬಹಿರಂಗ ಚರ್ಚೆಗೆ ಪ್ರಧಾನಿಗೆ ಸಿಎಂ ಪಂಥಾಹ್ವಾನ; ಉದ್ಧಟತನದ ಪರಮಾವಧಿ ಎಂದ HDK

ನವದೆಹಲಿ: ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ಧಟತನದ ಪರಮಾವಧಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಕೇಂದ್ರ ಸರಕಾರದ ನಡುವೆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಸರಕಾರ ಪ್ರತಿಯೊಂದಕ್ಕೂ ಕೇಂದ್ರ ಮತ್ತು ಪ್ರಧಾನಮಂತ್ರಿಗಳನ್ನು ದೂರುವ ಪರಿಪಾಠ ಬೆಳೆಸಿಕೊಂಡಿದೆ. ಇದು ಸರಿಯಲ್ಲ. ಕಾಂಗ್ರೆಸ್ ಸರಕಾರವು ತನ್ನ ಆಡಳಿತ ವೈಫಲ್ಯ, ಗ್ಯಾರಂಟಿಗಳ ವಿಫಲತೆ, ಬರಗಾಲ, ರೈತರ ಸಂಕಷ್ಟದ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಹೊರಳಿಸುವ ಉದ್ದೇಶದಿಂದ ನಿರಂತರವಾಗಿ ಮೋದಿ ಅವರ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ ಎಂದು ಹೇಳಿದರು.

ರಾಜ್ಯ ಸರಕಾರದ ಈ ನಡವಳಿಕೆಯ ಬಗ್ಗೆ ಕನ್ನಡಿಗರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದ ಅವರು ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರಕಾರವೇ ಆಲೋಚನೆ ಮಾಡಬೇಕು. ಅದು ಬಿಟ್ಟು ಸುಖಾಸುಮ್ಮನೆ ಕೇಂದ್ರದ ಮೇಲೆ ಗೂಬೆ ಕುರಿಸುವುದು ಸರಿ ಅಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು.

ಇದನ್ನೂ ಓದಿ: ಟೆಂಪೋದಲ್ಲಿ ಆನೆ ಸವಾರಿ: ವೈರಲ್ ಆಯ್ತು ವೀಡಿಯೋ!

ಲೋಪ ಆಗಿರುವ ಕಡೆ ಗಮನ ಹರಿಸಿ ಸರಿ ಮಾಡಿಕೊಳ್ಳಬೇಕು. ದೆಹಲಿಗೆ ಹೋಗಿ ಚರ್ಚೆ ಮಾಡಬೇಕು. ಆದರೆ, ಮುಖ್ಯಮಂತ್ರಿಯೊಬ್ಬರು ಪ್ರಧಾನಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಕರೆಯುವುದು ಉದ್ಧಟತನದ ಪರಮಾವಧಿ. ಇದು ಸರಿಯಾದ ನಡವಳಿಕೆ ಅಲ್ಲ. ಪ್ರಧಾನಿಗಳನ್ನು ಚರ್ಚೆಗೆ ಕರೆಯುವ ಮುನ್ನ ತಮ್ಮಿಂದ ಆಗಿರುವ ಲೋಪಗಳನ್ನು ಸರಿ ಪಡಿಸಿಕೊಳ್ಳಬೇಕಿದೆ. ಆ ಸೌಜನ್ಯವನ್ನು ಮುಖ್ಯಮಂತ್ರಿಗಳು ತೋರಿಸಬೇಕಿದೆ. ನಲವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಸರಕಾರ ರಾಜ್ಯದ ನೀರಾವರಿಗೆ ಏನಾದರೂ ಕೊಡುಗೆ ನೀಡಿದೆಯಾ? ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೆಯೇ ಟಾಂಗ್‌ ನೀಡಿದರು ಮಾಜಿ ಮುಖ್ಯಮಂತ್ರಿಗಳು.

ಪದೇ ಪದೇ ಕೇಂದ್ರದ ಜತೆ ಸಂಘರ್ಷ ಸರಿ ಅಲ್ಲ. ಇಂತಹ ಸಂಘರ್ಷದಿಂದ ಉಪಯೋಗವೂ ಇಲ್ಲ. ಕೇಂದ್ರದ ನೆರವು ಕಡಿತ ಬಗ್ಗೆ ಬೀದಿಯಲ್ಲಿ ಚರ್ಚೆ ಮಾಡಬಾರದು. ದೋಷಾರೋಪದಿಂದ ಏನಾದರೂ ಲಾಭ ಸಿಗುತ್ತದೆಯೇ? ಸಿಗುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಬೇಡ ಎಂದು ಅವರು ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರು ಸಲಹೆ ಮಾಡಿದರು.

ಕೆಲ ರಾಜ್ಯಗಳಿಂದ ಇವರು ಪಾಠ ಕಲಿಯಬೇಕಿದೆ. ಒಡಿಶಾ ರಾಜ್ಯದಲ್ಲಿ ನವೀನ್‌ ಪಟ್ನಾಯಕ್‌ ಅವರು ಐದು ಅವಧಿಗಳಿಂದ ಸರಕಾರ ನಡೆಸುತ್ತಿದ್ದಾರೆ. ಆ ರಾಜ್ಯದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ಬಡತನ ಇದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರಲಿ ಅಥವಾ ಬಿಜೆಪಿ ಇರಲಿ. ಅವರೆಂದೂ ಕೇಂದ್ರದ ಜತೆ ಸಂಘರ್ಷಕ್ಕೆ ಇಳಿದಿಲ್ಲ. ಸೌಹಾರ್ದತೆಯಿಂದ ಕೇಂದ್ರದಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರು ಕೇವಲ ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ನಾನೂ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದೆ. ಬಿಜೆಪಿ ಜತೆ ಸರಕಾರ ಮಾಡಿದ್ದಾಗ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇತ್ತು. ಕಾಂಗ್ರೆಸ್‌ ಜತೆ ಸರಕಾರ ಮಾಡಿದ್ದಾಗ ಬಿಜೆಪಿ ಅಧಿಕಾರದಲ್ಲಿ ಇತ್ತು. 2018ರಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಗಳಾಗಿದ್ದರು. ಅವರ ಜತೆ ನಾನೆಂದೂ ಸಂಘರ್ಷಕ್ಕೆ ಹೋಗಲಿಲ್ಲ. ರಾಜ್ಯಕ್ಕೆ ಆಗಬೇಕಾದ ಎಲ್ಲಾ ಕೆಲಸಗಳು ಆದವು. ನಾನು ಕೇಳಿದಾಕ್ಷಣ ಪ್ರಧಾನಿಗಳ ಕಚೇರಿಯಿಂದ ಭೇಟಿಗೆ ಅವಕಾಶ ದೊರೆಯುತ್ತಿತ್ತು. ಇಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ ಎಂದು ಅವರು ಸಿದ್ದರಾಮಯ್ಯ ಅವರ ವಿರುದ್ಧ ಪ್ರಹಾರ ನಡೆಸಿದರು.

RELATED ARTICLES

Related Articles

TRENDING ARTICLES