ನವದೆಹಲಿ : ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ತಮಗೆ ಈವರೆಗೆ ಅಧಿಕೃತ ಆಹ್ವಾನ ಬಂದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನವರು ಆಹ್ವಾನ ಕೊಟ್ಟರೂ ನಾನು ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ರಾಮಮಂದಿರ ಉದ್ಘಾಟನೆ ಆದ ಬಳಿಕ ನಾನು ಕುಟುಂಬಸ್ಥರೊಂದಿಗೆ ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮನ ದರ್ಶನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಹ್ವಾನ ಬಂದಿದೆ, ನಾವು ಹೋಗಲ್ಲ
ಈ ನಡುವೆ, ತಮಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಂದಿದೆ. ಆದರೆ, ಇದನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಕೇಂದ್ರಿತ, ರಾಜಕೀಯ ಕಾರ್ಯಕ್ರಮವನ್ನಾಗಿ ರೂಪಿಸಲಾಗಿದೆ. ಹಾಗಾಗಿ, ತಾವು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಎನ್ಸಿಪಿ ಮುಖಂಡ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.