ಲಖನೌ: ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ನಿಷೇಧಿಸುವಂಥೆ ಕೋರಿ ಅಲಹಾಬಾದ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಉತ್ತರ ಪ್ರದೇಶದ ಘಾಜಿಯಾಬಾದ್‌ನ ಭೋಲಾ ದಾಸ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಪ್ರಾಣ ಪ್ರತಿಷ್ಠೆಯು ಸನಾತನ ಸಂಪ್ರದಾಯಕ್ಕೆ ವಿರುದ್ಧವಾದ ನಡೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನಮತದ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಮಾರಂಭವನ್ನು ಆಯೋಜಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪ್ರಾಣ ಪ್ರತಿಷ್ಠೆ ಕುರಿತು ಜ್ಯೋತಿರ್ಪೀಠದ ಶಂಕರಾಚಾರ್ಯರ ಆಕ್ಷೇಪಗಳನ್ನು ಉಲ್ಲೇಖಿಸಿ, ಸಮಾರಂಭವನ್ನು ನಿಷೇಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ನಾಳೆಯಿಂದ ಲಾಲ್ಬಾಗ್ನಲ್ಲಿ ಫಲಪುಪ್ಪ ಪ್ರದರ್ಶನ!
ಜನವರಿ 22ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ದೇವಾಲಯದಲ್ಲಿ ರಾಮ್ ಲಲ್ಲಾನ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ. ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೆರವೇರಿಸಲಿದ್ದಾರೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಜ್ಯೋತಿಪೀಠಗಳ ಶಂಕರಾಚಾರ್ಯರ ಆಕ್ಷೇಪವಿದೆ. ಪುಷ್ಯ ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ದೇವಾಲಯ ಇನ್ನೂ ಅಪೂರ್ಣವಾಗಿದೆ. ಅಪೂರ್ಣ ದೇವಾಲಯದಲ್ಲಿ ಯಾವುದೇ ದೇವರನ್ನು ಪ್ರತಿಷ್ಠಾಪಿಸಲು ಸಾಧ್ಯವಿಲ್ಲ” ಎಂದು ಮನವಿಯಲ್ಲಿ ತಿಳಿಸಲಾಗಿದೆ.