Sunday, December 22, 2024

ಕುಮಾರಸ್ವಾಮಿ ಕೇಂದ್ರ ಮಂತ್ರಿ: ಮೋದಿ ಮನಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ-HDD

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಆಗುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮುಂದೆ ಅ ಬಗ್ಗೆ ಚರ್ಚೆ ಆಗಿಲ್ಲ. ಆದರೆ, ಮೋದಿ ಅವರ ಮನಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ಉದೇಶಿಸಿ ಮಾತನಾಡಿದ ಅವರು, ಒಂದು ಬಾರಿ ಸಂಸತ್ ಸದಸ್ಯರಾದವರನ್ನು ಮಂತ್ರಿ ಮಾಡಿದ್ದಾರೆ. ಮೋದಿ‌ ಅವರ‌ ಆಕ್ಷನ್ ಪ್ಲ್ಯಾನ್ ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಅವರ ಮನಸ್ಸಿ‌ಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾರಾ? ಇಲ್ಲವಾ? ಎಂದು ಕೇಳಲಾದ ಪ್ರಶ್ನೆಗೂ ಉತ್ತರಿಸಿದ ಅವರು, ನರೇಂದ್ರ ಮೋದಿ ಅವರು ಏನು ಹೇಳ್ತಾರೋ ನೊಡೋಣ. ಅವರ ಮನಸಿನಲ್ಲಿ ಇದೆಯೋ ಗೊತ್ತಿಲ್ಲ. ಮೋದಿ ಅವರು ಹೇಳಿದಂತೆ ಕುಮಾರಸ್ವಾಮಿ ಅವರು ಕೇಳುತ್ತಾರೆ. ಕುಮಾರಸ್ವಾಮಿ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೆ ನಾವೆಲ್ಲ ಕುಳಿತು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಯಾವುದೇ ಕಾರಣಕ್ಕೂ ನಾನು ಲೋಕಸಭೆಗೆ ಸ್ಪರ್ಧೆ ಮಾಡೊದಿಲ್ಲ. 92 ವರ್ಷ ವಯಸ್ಸಾಯ್ತು. ರಾಜ್ಯಸಭೆಯ ಅವಧಿ ಇನ್ನು ಎರಡೂವರೆ ವರ್ಷ ಇದೆ. ರಾಜ್ಯಸಭೆಯೇ ಸಾಕು. ಚುನಾವಣೆ ವೇಳೆ ಮೈತ್ರಿಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ. ನಮ್ಮ ಪಕ್ಷದ ಪರವಾಗಿ ಪ್ರವಾಸ ಮಾಡುತ್ತೇನೆ. ಬಿಜೆಪಿಯವರು ಎಲ್ಲಿಗೆ ಕರೆದರೂ ಹೋಗುತ್ತೇನೆ. ಮಾತನಾಡುವ ಶಕ್ತಿ ಇದೆ, ನನಪಿನ ಶಕ್ತಿ ಇದೆ ಎಂದರು ಮಾಜಿ ಪ್ರಧಾನಿಗಳು.

ಇದನ್ನೂ ಓದಿ: ನಾವು ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರಿಸಿಕೊಂಡವರು: ಒಂದು ಧರ್ಮ, ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ:ಸಿಎಂ

ಮೋದಿ ಅವರ ವ್ರತಾಚರಣೆ ಬಗ್ಗೆ ಮೆಚ್ಚುಗೆ:

ನರೇಂದ್ರ ಮೋದಿ ಅವರಿಂದ 11 ದಿನಗಳ ವ್ರತಾಚರಣೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ದೇವೇಗೌಡ ಅವರು, ಮೋದಿ‌ ಅವರು ನಿಷ್ಠೆಯಿಂದ, ಕ್ರಮಬದ್ದತೆಯಿಂದ ವ್ರತಾಚರಣೆ ಮಾಡುತ್ತಿದ್ದಾರೆ. ಸೀತಾಮಾತೆ ಅಪಹರಣ ಮಾಡಿದ ನಾಸಿಕ್ ನಿಂದ ಅವರು ವ್ರತಾಚರಣೆ ಶುರು ಮಾಡಿದ್ದಾರೆ. ಅಲ್ಲಿ ಕರಿರಾಮ ಅಂತ ವಿಗ್ರಹ ಸ್ಥಾಪನೆ ಮಾಡಿದ್ದಾರೆ ಎಂದರು.

ಮೋದಿ ಅವರು ಪುಣ್ಯ ಮಾಡಿಕೊಂಡು ಬಂದಿದ್ದಾರೆ. ನಿಯಮ, ನಿಷ್ಠೆ, ಶಿಸ್ತಿನಿಂದ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಶಾಸ್ತ್ರೋಕ್ತವಾಗಿ ಶ್ರದ್ಧೆಯಿಂದ ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ನಾನು ಕೂಡ ಇಂತಹ ವ್ರತಾಚರಣೆ ಮಾಡಿರಲಿಲ್ಲ. ಮೋದಿ ಅವರಿಗೆ ದೈವ ಶಕ್ತಿ ಇದೆ ಎಂದು ಹೇಳಿದರು.

ನಾನು ಕೂಡ ರಾಮಮಂದಿರ ಕಾರ್ಯಕ್ರಮಕ್ಕೆ ಹೋಗುತ್ತೇನೆ. 99% ನಾನು ಹೋಗುತ್ತೇನೆ. ನನ್ನ ಶ್ರೀಮತಿ ಜೊತೆ ಹೋಗುವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಜನವರಿ 22ರ ಬಳಿಕ ರಾಮಮಂದಿರಕ್ಕೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು; ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡಲು ಹೇಳಿದ್ದಾರೆ. ಇದು ಒಳ್ಳೆಯ ವಿಚಾರ. ಸಾಫ್ಟ್ ಹಿಂದುತ್ವವೋ, ಇನ್ನೊಂದೋ ಗೊತ್ತಿಲ್ಲ. ಸಿದ್ದರಾಮಯ್ಯ ರಾಮಮಂದಿರಕ್ಕೆ ಹೋಗುವ ಹೇಳಿಕೆ ಸ್ವಾಗತಾರ್ಹ ಎಂದು ಅವರು ತಿಳಿಸಿದರು.

ಯುವನಿಧಿ ಯೋಜನೆ ಬಗ್ಗೆಯೂ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು ಈ ಯೋಜನೆ ಒಳ್ಳೆಯದು, ಯುವ ಜನರಿಗೆ ಹಣ ಕೊಡಲಿ. ಅದರಲ್ಲಿ ತಪ್ಪೇನೂ ಇಲ್ಲ. ಎಲ್ಲಾ ಯುವಕರಿಗೂ ಹಣ ಕೊಡಲಿ. ಆ ಯುವಜನರು ಕೂಡ ರಾಮ ಮಂದರಕ್ಕೆ ಹೋಗಿ ಬರಲಿ. ಕೂಡಲೇ ಯುವನಿಧಿಯ ಮೊದಲ ಕಂತಿನ ಹಣ ಬಿಡುಗಡೆ ಮಾಡಲಿ ಎಂದು ಹೇಳಿದರು.

ಹಾಸನದಿಂದ ಪ್ರಜ್ವಲ್ ಸ್ಪರ್ಧೆ:

ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಮತ್ತೆ ಸ್ಪರ್ಧೆ ಮಾಡುತ್ತಾರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಈ ಬಗ್ಗೆ ನಿಮಗೆ ಅನುಮಾನ ಏಕೆ? ಪ್ರಜ್ವಲ್ ಗೆ ಮೋದಿ‌ ಅವರು ಆಶೀರ್ವಾದ ಮಾಡ್ತಾರೆ‌. ಕುಮಾರಸ್ವಾಮಿ ಕೂಡಾ ಆಶೀರ್ವಾದ ಮಾಡ್ತಾರೆ. ನಾನು ಕೂಡಾ ಆಶೀರ್ವಾದ ಮಾಡಿದ್ದೀನಿ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜಿಟಿ ದೇವೆಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ ಹಾಜರಿದ್ದರು.

RELATED ARTICLES

Related Articles

TRENDING ARTICLES