ಬೆಂಗಳೂರು : ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಆಸ್ತಿ ಮತ್ತೊಮ್ಮೆ 100 ಬಿಲಿಯನ್ ಡಾಲರ್ ಗಡಿ ದಾಟಿದೆ.
ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಸಂಪತ್ತು 2.8 ಬಿಲಿಯನ್ ಡಾಲರ್‌ಗಳಷ್ಟು ಏರಿಕೆ ಕಂಡಿದ್ದು, 101.8 ಬಿಲಿಯನ್ ಡಾಲರ್ ಮುಟ್ಟಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಒಡೆತನ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಷೇರುಗಳು ಶೇ. 2.6ರಷ್ಟು ಏರಿಕೆ ಕಂಡು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಈ ಬೆನ್ನಲ್ಲೇ ಅವರ ಆಸ್ತಿಯೂ ಏರಿಕೆ ಕಂಡಿದೆ.
ಅಂಬಾನಿ ಆಸ್ತಿಯಲ್ಲೂ ಏರಿಕೆ
ಈ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅವರು 2022ರ ಜೂನ್ ನಂತರ ಮೊದಲ ಬಾರಿಗೆ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಮರಳಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕಂಪನಿ ಅಧ್ಯಕ್ಷ ಮುಕೇಶ್ ಅಂಬಾನಿ ಶೇ. 42ರಷ್ಟು ಷೇರು ಹೊಂದಿದ್ದಾರೆ. ಸಂಸ್ಥೆಯು ತ್ರೈಮಾಸಿಕ ಲಾಭದಲ್ಲಿ ಏರಿಕೆಯನ್ನು ವರದಿ ಮಾಡಿದ ನಂತರ ಅದರ ಷೇರುಗಳು ಅಕ್ಟೋಬರ್‌ನ ಕನಿಷ್ಠ ಮಟ್ಟದಿಂದ ಶೇ.22ರಷ್ಟು ಏರಿಕೆ ಕಂಡಿವೆ. ಪರಿಣಾಮ ಅಂಬಾನಿ ಆಸ್ತಿಯಲ್ಲೂ ಏರಿಕೆಯಾಗಿದೆ.