ಬೆಂಗಳೂರು : ನಾನು ಅಯೋಧ್ಯೆಗೆ ಹೋಗಿ ರಾಮಮಂದಿರಕ್ಕೂ ಭೇಟಿ ನೀಡಿ ಬರಬೇಕೆಂದು ತೀರ್ಮಾನ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಹಿಂದೂ ವಿರೋಧಿಯೂ ಅಲ್ಲ, ಶ್ರೀರಾಮಚಂದ್ರನ ವಿರೋಧಿಯೂ ಅಲ್ಲ ಎಂದು ತಿಳಿಸಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಬಿಜೆಪಿ ನಾಟಕ ಮಂಡಳಿಯ ಪ್ರದರ್ಶನವೆಲ್ಲ ಮುಗಿಯಲಿ. ಬಳಿಕ ಅರಾಮವಾಗಿ ಒಂದು ದಿನ ನಾನು ಅಯೋಧ್ಯೆಗೆ ಹೋಗುತ್ತೇನೆ. ರಾಮಮಂದಿರಕ್ಕೂ ಭೇಟಿ ನೀಡಿ, ಶ್ರೀರಾಮನ ದರ್ಶನ ಮಾಡಲು ನಿರ್ಧರಿಸಿದ್ದೇನೆ. ನನ್ನನ್ನು ಶ್ರೀ ರಾಮಚಂದ್ರನ ವಿರೋಧಿಯೆಂದು ಕತೆ ಕಟ್ಟುತ್ತಿರುವವರ ಜೊತೆಗೂ ಆ ಭೇಟಿಯ ಪೋಟೋಗಳನ್ನು ಹಂಚಿಕೊಳ್ಳುತ್ತೇನೆ ಎಂದು ಕುಟುಕಿದ್ದಾರೆ.
ರಾಮಲಲ್ಲ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬ ನಮ್ಮ ಪಕ್ಷದ ಹಿರಿಯ ನಾಯಕರ ನಿಲುವನ್ನು ಬೆಂಬಲಿಸುತ್ತೇನೆ. ನನ್ನ ಈ ಹೇಳಿಕೆಯ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಯಥಾ ಪ್ರಕಾರ ನನ್ನನ್ನು ಹಿಂದೂ ವಿರೋಧಿ ಎಂದು ಚಿತ್ರಿಸಲು ನಾಲಗೆ ಹರಿಬಿಡುತ್ತಿದ್ದಾರೆ. ನಾವು ಮಾತ್ರವಲ್ಲ ಹಿಂದೂ ಧರ್ಮದ ಹಿರಿಯ ಸ್ವಾಮೀಜಿಗಳಾದ ಶಂಕರಾಚಾರ್ಯರು ಕೂಡಾ ಜನವರಿ 22ರಂದು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗೂ ಇದೆ ಎಂದು ಸಿದ್ದರಾಮಯ್ಯ ಚಾಟಿ ಬಿಸಿದ್ದಾರೆ.