ಬೆಂಗಳೂರು: ಖಾಸಗಿ ಬ್ಯಾಂಕ್‌ನಲ್ಲಿ ಪಡೆದುಕೊಂಡಿದ್ದ ಸಾಲಕ್ಕೆ ದುಪ್ಪಟ್ಟು ಹಣ ಕಟ್ಟಿದರೂ ಕಿರುಕುಳ ನಿಂತಿಲ್ಲ ಎಂದು ಆರೋಪಿಸಿ ಕುಟುಂಬವೊಂದು ವಿಕಾಸಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ವಿಕಾಸಸೌಧದ ಮುಂದೆ ಬಂದಿದ್ದ ಶಾಯಿಸ್ತಾ ಬಾನು ಹಾಗೂ ಮೊಹಮದ್ ಮುನಾಯಿದ್ ಉಲ್ಲಾ ದಂಪತಿ ಏಕಾಏಕಿ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದಾರೆ. ತಮಗೆ ಅನ್ಯಾಯವಾಗಿದೆ, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕೂಗಿಕೊಡಿದ್ದಾರೆ.
ಆದರೆ, ಅಷ್ಟರಲ್ಲಿ ವಿಕಾಸಸೌಧದ ಕಾವಲಿಗೆ ಇದ್ದ ಪೊಲೀಸರು ಅವರನ್ನು ತಡೆದಿದ್ದು, ರಕ್ಷಣೆ ಮಾಡಿದ್ದಾರೆ. ಮನೆ ಮೇಲೆ 50 ಲಕ್ಷ ರೂಪಾಯಿ ಸಾಲವನ್ನು ಈ ಕುಟುಂಬವು ಪಡೆದಿದೆ ಎನ್ನಲಾಗಿದೆ. ಈ ಸಾಲಕ್ಕೆ ಈಗ ಬಡ್ಡಿ ಸೇರಿ ಒಟ್ಟು 97 ಲಕ್ಷ ರೂಪಾಯಿಯನ್ನು ಕಟ್ಟಿದರೂ ಬ್ಯಾಂಕ್‌ನಿಂದ ಕಿರುಕುಳ ತಪ್ಪಿಲ್ಲ ಎಂದು ಆರೋಪ ಮಾಡಿದ್ದಾರೆ.
ಹೀಗಾಗಿ ತಮಗೆ ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಮೇಲೆ ಈಗ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.
ಐಪಿಸಿ 309 (ಆತ್ಮಹತ್ಯೆಗೆ ಯತ್ನ) ಹಾಗೂ ಐಪಿಸಿ 290 (ಸಾರ್ವಜನಿಕ ಸ್ಥಳಗಳಲ್ಲಿ ದುರ್ವರ್ತನೆ ) ಅಡಿ ಕೇಸ್ ದಾಖಲಾಗಿದೆ. ಶಾಯಿಸ್ತಾ ಬಾನು ಹಾಗು ಮೊಹಮದ್ ಮುನಾಯಿದ್ ಉಲ್ಲಾ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಆ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಠಾಣಾ ಜಾಮೀನಿನ ಮೇಲೆ ಅವರನ್ನು ಪೊಲೀಸರು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.