ಗದಗ : ನನಗೆ ಬರ್ತ್ಡೇ ಅಂದ್ರೇನೇ ಭಯ ಬಂದು ಬಿಟ್ಟಿದೆ ಹಾಗೂ ಅಸಹ್ಯವಾಗಿಬಿಟ್ಟಿದೆ ಎಂದು ನಟ ಯಶ್ ಭಾವುಕರಾಗಿದ್ದಾರೆ.
ಗದಗದ ಸೊರಣಗಿ ಗ್ರಾಮದಲ್ಲಿ ಮೃತರಾದ ತಮ್ಮ ಅಭಿಮಾನಿಗಳಾದ ಮುರಳಿ, ನವೀನ್, ಹನುಮಂತರ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ್ದಾರೆ.
ನಾನು ಹೆಂಡತಿ ಮಕ್ಕಳ ಜೊತೆ ಗೋವಾದಲ್ಲಿ ಇದ್ದೆ. ಈ ಸುದ್ದಿ ಕೇಳಿದಾಗ ಬಹಳ ಬೇಜಾರ್ ಆಗಿದೆ. ಕಳೆದ ವರ್ಷ ಮನೆ ಬಳಿ ಬೆಂಕಿ ಹಂಚಿಕೊಂಡಿದ್ದರು. ಯಾರು ಇದನ್ನು ಇಷ್ಟ ಪಡೋಲ್ಲ. ಈ ರೀತಿ ಆಗುತ್ತೆ ಅನ್ನೊದಕ್ಕೆ ನಾನು ಸರಳವಾಗಿ ಹುಟ್ಟುಹಬ್ಬ ಆಚರಿಸಲು ತಿರ್ಮಾನ ಮಾಡಿದ್ದೆ. ಈಗ ಅದನ್ನೆಲ್ಲಾ ಮಾತನಾಡುವ ಸಮಯವಲ್ಲ ಎಂದು ಬೇಸರಿಸಿದ್ದಾರೆ.
ಮೃತ ಅಭಿಮಾನಿಗಳ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇವೆ. ಏನೇ ಪರಿಹಾರ ಕೊಟ್ಟರು ಮಗ ವಾಪಸ್ ಬರ್ತಾನಾ? ನಾನು ಇಲ್ಲಿ ಬಂದಿರುವುದು ಅವರ ತಂದೆ ತಾಯಿಗಾಗಿ, ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇನೆ. ಅಭಿಮಾನ ತೋರಿಸುವುದಾದ್ರೆ ಬದುಕಲ್ಲಿ ಖುಷಿಯಾಗಿರಿ, ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ಇನ್ಮುಂದೆ ನನ್ನ ಬ್ಯಾನರ್ ಎಲ್ಲೂ ಕಟ್ಟಬೇಡಿ, ಎಲ್ಲಿಯೂ ಕಟೌಟ್ ಹಾಕಬೇಡಿ ಎಂದು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ.
ನನಗಂತು ಈ ರೀತಿ ಅಭಿಮಾನ ಬೇಡವೇ ಬೇಡ
ನಿಮ್ಮೊಂದಿಗೆ ನಾನು ಇದ್ದೇನೆ. ಯಾವುದೇ ಕಾರಣಕ್ಕೂ ಆತಂಕ ಬೇಡ. ಈ ದುರ್ಘಟನೆ ಆಗಬಾರದಿದ್ದು, ನನಗೂ ತುಂಬಾ ದುಃಖ ಆಗಿದೆ. ನಿಮ್ಮ ಪ್ರೀತಿಗೆ ನಾನು ಸದಾ ಆಭಾರಿಯಾಗಿದ್ದೇನೆ. ಕಲಾವಿದರ ಮೇಲೆ ಅಭಿಮಾನ ಇರಲಿ. ಆದರೆ, ಈ ರೀತಿಯ ಅಭಿಮಾನ ಬೇಡ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಇದೆಲ್ಲಾ ಬಿಟ್ಟುಬಿಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕು ಎಂದು ಯಾರು ಇಷ್ಟ ಪಡಲ್ಲ. ನನಗಂತು ಈ ರೀತಿ ಅಭಿಮಾನ ಬೇಡವೇ ಬೇಡ ಎಂದು ಯಶ್ ಹೇಳಿದ್ದಾರೆ.