ಉತ್ತರ ಪ್ರದೇಶ: ಅಯೋಧ್ಯೆಯ ರಾಮ ಮಂದಿರದಲ್ಲಿ ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಷ್ಟ್ರ ರಾಜಧಾನಿಯಾದ್ಯಂತ ಸುಮಾರು 14 ಸಾವಿರ ದೇಗುಲಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಬಿಜೆಪಿಯ ದೆಹಲಿ ಮುಜರಾಯಿ ಘಟಕದ ಅಧ್ಯಕ್ಷ ಕರ್ನೆಲ್ ಸಿಂಗ್ ತಿಳಿಸಿದರು.
ಪ್ರತಿ ದೇಗುಲದಲ್ಲಿ ಸುಮಾರು 200 ಮಂದಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಾರೆ. ಒಟ್ಟಾರೆ 30 ಲಕ್ಷ ಜನರು ದೇಗುಲಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು. ಜ.20ರಂದು ಖಾಟು ಶ್ಯಾಮ್ ದೇಗುಲದಲ್ಲಿ 1.08 ಲಕ್ಷ ದೀಪಗಳನ್ನು ಬೆಳಗಲಾಗುತ್ತದೆ ಮತ್ತು ಜ.17ರಂದು ದೇಗುಲದ ಪುರೋಹಿತರು ಬೈಕ್‌ನಲ್ಲಿ ರ್ಯಾಲಿ ನಡೆಸಲಿದ್ದಾರೆ ಎಂದೂ ಮಾಹಿತಿ ನೀಡಿದರು.
ಇದನ್ನೂ ಓದಿ: ಬಿ.ಕೆ. ಹರಿಪ್ರಸಾದ್ ವಿರುದ್ಧ ಪುನೀತ್ ಕೆರೆಹಳ್ಳಿ ದೂರು! ಕಾಂಗ್ರೆಸ್ ನಿಂದ ಪ್ರತಿ ದೂರು
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸದ್ಯ ರಾಮಜನ್ಮಭೂಮಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ರಾಮನ ವಿಗ್ರಹವು 51 ಇಂಚು ಎತ್ತರ ಇರಲಿದ್ದು, ಬರೋಬ್ಬರಿ 1.5 ಟನ್ ತೂಕ ಹೊಂದಿದೆ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ 4 ದಿನ ಮುನ್ನ ಅಂದರೆ ಜನವರಿ 18 ರಂದೇ ಗರ್ಭಗುಡಿಗೆ ಶ್ರೀರಾಮನ ಪ್ರವೇಶ ಆಗಲಿದೆ. ಅಲ್ಲದೆ ರಾಮನ ಕಪ್ಪು ಬಣ್ಣದ ವಿಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಮುಖ 5 ವರ್ಷದ ಮಗುವಿನಷ್ಟೇ ಮುಗ್ಧತೆಯನ್ನು ಹೊಂದಿದೆ. ಪ್ರತಿ ವರ್ಷ ರಾಮ ನವಮಿಯಂದು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖಿನಂದು ಮಧ್ಯಾಹ್ನ 12 ಗಂಟೆಗೆ ಸೂರ್ಯ ಸ್ವತಃ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆಯನ್ನು ಸ್ಪರ್ಶಿಸಲಿದ್ದಾನೆ ಎಂದು ಅವರು ವಿವರಿಸಿದರು.