Monday, December 23, 2024

T20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ ICC; ಜೂ.9ರಂದು ಭಾರತ-ಪಾಕ್ ಸೆಣಸಾಟ

ದುಬೈ: ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಈ ಬಾರಿ 20 ತಂಡಗಳು ಭಾಗವಹಿಸುತ್ತಿದ್ದು, ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು(ಜ.5) ಪ್ರಕಟಿಸಿದೆ.

ಟಿ20 ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ್ದು, ಜೂ.9ರಂದು ಭಾರತ ಹಾಗೂ ಪಾಕಿಸ್ತಾನ ಸೆಣಸಾಡಲಿದೆ.

ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯವು ಜೂನ್ 1ರಂದು ನಡೆಯಲಿದ್ದು, ಸಹ-ಆತಿಥೇಯ ಅಮೇರಿಕ ತಂಡವು ಕೆನಡಾ ತಂಡವನ್ನು ಎದುರಿಸುವುದರೊಂದಿಗೆ ಚಾಲನೆ ಸಿಗಲಿದೆ. ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಬಹು ನಿರೀಕ್ಷಿತ ಪಂದ್ಯವು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ತಮ್ಮ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್‌ ತಂಡದ ವಿರುದ್ಧ ಟೀಮ್ ಇಂಡಿಯಾ ಸೆಣಸಾಡಲಿದೆ.

2007ರ ಟಿ20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾವು, ಪಾಕಿಸ್ತಾನ, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ತಂಡಗಳ ಜೊತೆಗೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಭಾರತ ತಂಡದ ವೇಳಾಪಟ್ಟಿ ಹೀಗಿದೆ:

  1. ಜೂನ್ 5: ಭಾರತ vs ಐರ್ಲೆಂಡ್ (ನ್ಯೂಯಾರ್ಕ್)
  2. ಜೂನ್ 9: ಭಾರತ vs ಪಾಕಿಸ್ತಾನ (ನ್ಯೂಯಾರ್ಕ್)
  3. ಜೂನ್ 12: ಭಾರತ vs ಯುಎಸ್ಎ(ನ್ಯೂಯಾರ್ಕ್)
  4. ಜೂನ್ 15: ಭಾರತ vs ಕೆನಡಾ (ಫ್ಲೋರಿಡಾ)

2024ರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ವೆಸ್ಟ್‌ ಇಂಡೀಸ್‌ನ ಆರು ಮತ್ತು ಯುಎಸ್‌ಎನ ಮೂರು ಸ್ಥಳಗಳಲ್ಲಿ ಆಡಿಸಲಾಗುತ್ತದೆ.

ಐಸಿಸಿ ವೆಬ್‌ಸೈಟ್‌ನ ಪ್ರಕಾರ, ಗ್ರೂಪ್ ಬಿ ಗುಂಪಿನಲ್ಲಿ 2022ರ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಜೊತೆಗೆ ನಮೀಬಿಯಾ, ಸ್ಕಾಟ್‌ಲ್ಯಾಂಡ್ ಮತ್ತು ಓಮನ್‌ ತಂಡಗಳನ್ನು ಇರಿಸಲಾಗಿದೆ.

ವೆಸ್ಟ್ ಇಂಡೀಸ್ ತಂಡವನ್ನು ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಉಗಾಂಡಾ ಮತ್ತು ಪಪುವಾ ನ್ಯೂ ಗಿನಿಯಾ ತಂಡಗಳನ್ನು ‘ಸಿ’ ಗುಂಪಿನಲ್ಲಿ ಇರಿಸಲಾಗಿದೆ. ‘ಡಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ ತಂಡಗಳು ಸೆಣಸಾಡಲಿದೆ.

2023ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ವಿಫಲರಾಗಿರುವ ಟೀಮ್ ಇಂಡಿಯಾ, ತಮ್ಮ ಎರಡನೇ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಟೀಮ್ ಇಂಡಿಯಾ, ಎಲ್ಲ ಗ್ರೂಪ್‌ ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ. ಸೂಪರ್ 8 ಪಂದ್ಯಗಳನ್ನು ಅರ್ಹತೆ ಪಡೆದರೆ ವೆಸ್ಟ್ ಇಂಡೀಸ್‌ನಲ್ಲಿ ಆಡುವ ಸಾಧ್ಯತೆಯಿದೆ.

2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡು ಸೆಮಿಫೈನಲ್ ಪಂದ್ಯಗಳು ಜೂನ್ 26 ಮತ್ತು 27ರಂದು ನಡೆಯಲಿದ್ದರೆ, ಜೂನ್ 29ರಂದು ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

 

 

RELATED ARTICLES

Related Articles

TRENDING ARTICLES