Monday, December 23, 2024

ನಿಮಗೆ ಗಂಡಸ್ತನ ಇದೆಯಾ ಎಂದ ಹೆಚ್​ ಡಿ ಕುಮಾರಸ್ವಾಮಿ!

ಬೆಂಗಳೂರು: ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಪ್ರಕರಣಕ್ಕೆ ಸಂಬಂಧಿಸಿ ತಾವು ನೀಡಿದ್ದ ಹೇಳಿಕೆಯ ಬಗ್ಗೆ, ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದ ಸಚಿವರಿಬ್ಬರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಪ್ರತ್ಯುತ್ತರ ನೀಡಿರುವ ಅವರು; ಸಿಎಂ ಸಿದ್ದರಾಮಯ್ಯ ಅವರನ್ನು ಕರ್ನಾಟಕದ ‘ನೀರೋ’ ಎಂದು ಜರೆದಿದ್ದಾರೆ.

ಅಲ್ಲದೆ, ದಾಖಲೆ ಇಟ್ಟುಕೊಂಡೇ ವಿಕ್ರಮ ಸಿಂಹ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಬೇಕಿದ್ದರೆ ದಾಖಲೆಗಳನ್ನು ನಾನೇ ತಂದುಕೊಡುತ್ತೇನೆ. ಆಮೇಲೆ ಕ್ರಮ ಜರುಗಿಸುವ ದಮ್ಮು, ತಾಕತ್ತು ಹಾಗೂ ಸತ್ಯದ ಪರ ನಿಲ್ಲುವ ಗಂಡಸ್ತನ ಇದೆಯಾ? ಎಂದು ಅವರು ಪ್ರಶ್ನಿಸಿದ್ದಾರೆ.

ಕರ್ನಾಟಕದ ‘ನೀರೋ’ಗೆ ರಾಜಕೀಯ ಊಳಿಗ ಮಾಡುತ್ತಿರುವ ಗೃಹಮಂತ್ರಿ ಪರಮೇಶ್ವರ್ ಮತ್ತು ಸಿದ್ದಹಸ್ತರು ಹೇಳಿದ್ದಕ್ಕೆಲ್ಲ ‘ಪರಿಪೂರ್ಣ ಸಹಕಾರ’ ಕೊಡುವ ಹಾಸನ ಜಿಲ್ಲಾ ಉಸ್ತುವಾರಿ ಕೆ ಎನ್ ರಾಜಣ್ಣ ಅವರು ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಪ್ರಕರಣಕ್ಕೆ ಸಂಬಂಧಿಸಿ ನಾನು ಕೊಟ್ಟಿರುವ ಹೇಳಿಕೆಗಳಿಗೆ ನೀಡಿದ ಪ್ರತಿಕ್ರಿಯೆ ಗಮನಿಸಿದ್ದೇನೆ.

ಇದನ್ನೂ ಓದಿ: ಇಸ್ರೋದ ಮತ್ತೊಂದು ಸಾಧನೆ: ಕಕ್ಷೆ ಸೇರಿದ ಇಸ್ರೋದ ಆದಿತ್ಯ L1: ಪ್ರಧಾನಿ ಮೋದಿ ಪ್ರಶಂಸೆ

ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಜಾರಿಕೊಂಡಿದ್ದಾರೆ ಈ ಸಚಿವರಿಬ್ಬರು. ‘ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ’ ಅನ್ನುವುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ತಪ್ಪಿದರೆ, ಸತ್ಯದ ಪರ ನಿಲ್ಲುವ ಗಂಡಸ್ತನ ನಮಗಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ನೈತಿಕತೆಯನ್ನಾದರೂ ತೋರಬೇಕು ಎಂದು ಅವರು ಕಿಡಿಕಾರಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ನಾನು ಹೇಳಿದ್ದೆಲ್ಲವೂ ಸತ್ಯ.. ಅಪ್ಪಟ ಸತ್ಯ. ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ. ಆ ದಾಖಲೆಗಳನ್ನು ತೆಗೆದುಕೊಂಡು ಎಲ್ಲಿಗೆ ಬರಲಿ, ಹೇಳಿ? ಆಗ ಕ್ರಮ ಜರುಗಿಸುವ ದಮ್ಮು ತಾಕತ್ತನ್ನು ತೋರುವಿರಾ? ಅಥವಾ ಪಲಾಯನ ಮಾಡುವಿರಾ? ಬಹಿರಂಗ ಚರ್ಚೆಗೂ ನಾನು ತಯಾರು. ನೀವು ಸಿದ್ಧವೇ? ಎಲ್ಲಿ? ಯಾವಾಗ? ಎಷ್ಟೊತ್ತಿಗೆ? ನೀವು ಫಿಕ್ಸ್ ಮಾಡುತ್ತೀರಾ? ನಾನು ಫಿಕ್ಸ್ ಮಾಡಲಾ? ಅಲ್ಲಿ ನಾನು ಹೇಳಿದ್ದೇನು ಎಂಬ ಬಗ್ಗೆ ಚರ್ಚಿಸೋಣ ಎಂದು ಸಚಿವರಿಬ್ಬರಿಗೆ ಸವಾಲು ಹಾಕಿದ್ದಾರೆ.

ಸರಿ, ವಿಕ್ರಂಸಿಂಹ ಮರ ಕಡಿದಿದ್ದರೆ FIR ನಲ್ಲಿ ಅವರ ಹೆಸರಿಲ್ಲ, ಯಾಕೆ!? ಆ FIR ಪ್ರತಿ ಲಗತ್ತಿಸಿದ್ದೇನೆ. ಅದನ್ನು ನೋಡಿ, ಆಮೇಲೆ ಮಾತನಾಡಿ ಎಂದು ಎಕ್ಸ್ ಜಾಲತಾಣದಲ್ಲಿ ತಾವು ಮಾಡಿರುವ ಪೋಸ್ಟ್ ಜತೆ FIR ಪ್ರತಿಯನ್ನು ಅವರು ಟ್ಯಾಗ್ ಮಾಡಿದ್ದಾರೆ.

ದಲಿತರ ಹೆಸರಿನಲ್ಲಿ ರಾಜಕೀಯ ಬಾಳು ಕಟ್ಟಿಕೊಂಡ ಪರಮೇಶ್ವರ್, ರಾಜಣ್ಣನವರೇ.. ನಿಮ್ಮ ರೋಷಾವೇಷ ಆ ದಲಿತ ಅಧಿಕಾರಿಯನ್ನು ಅಮಾನತು ಮಾಡುವ ಕ್ಷಣದಲ್ಲಿ ಯಾರ ಬೂಟಿನ ಕೆಳಗೆ ಬಿದ್ದು ಹೊರಳಾಡುತ್ತಿತ್ತು? ಒಬ್ಬ ಗಾರ್ಡ್ ಅಮಾನತಿಗೂ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯೇ ಆದೇಶ ಹೊರಡಿಸಬೇಕೆ? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಅಹಿಂದ ಅಹಿಂದ ಎಂದು ಬೆಳಗೆದ್ದರೆ ಭಜನೆ ಮಾಡುವ ನೀವು, ಆ ಅಧಿಕಾರಿಯಿಂದ ₹50 ಲಕ್ಷ ಕಿತ್ತ ನಿಮ್ಮ ನೀತಿಗೆಟ್ಟ ಹೊಲಸು ಶಾಸಕನ ಬಗ್ಗೆ ನಿಮ್ಮ ಮೌನ ಅಸಹ್ಯ. ನಿಮ್ಮದೇ ಲಜ್ಜೆಗೆಟ್ಟ ಸರಕಾರ ಎಸಗಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆಯೇ? ಇದೆಲ್ಲದರ ಚಿದಂಬರ ರಹಸ್ಯ ಯಶವಂತಪುರ ಫ್ಲಾಟ್ ನಲ್ಲಿ ಅಡಗಿದೆ. ಯಾವ ತನಿಖೆ ಮಾಡುತ್ತೀರಿ? ಎಂದು ಅವರು ಸಚಿವರನ್ನು ಕೇಳಿದ್ದಾರೆ.

ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾ ಇದು. ಅದರ ಹಿಂದಿರುವ ಸಿದ್ಧಸೂತ್ರದಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ. ಇಡೀ ವಿಕ್ರಂಸಿಂಹ ಅಂಕಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಒಬ್ಬರದೇ. ಅವರೇ ಶ್ರೀಮನ್ ಸಿದ್ದರಾಮಣ್ಣ!! ಎಂದು ಸಿಎಂ ಅವರಿಗೆ ಟಾಂಗ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES