ಬೆಂಗಳೂರು: ಚಿನ್ನದ ಕತ್ತಿ ಶ್ರೀರಾಮನಿಗೆ ಅರ್ಪಣೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ಪ್ರಧಾನಿ ಆಗಿದ್ದಾಗ ನನಗೆ ಒಮನ್ ದೇಶದಲ್ಲಿ ಚಿನ್ನದ ಕತ್ತಿಯನ್ನು ಉಡುಗೋರೆಯಾಗಿ ನೀಡಿದ್ದರು. ಅದನ್ನು ತೆರಿಗೆ ಕಟ್ಟಿ ಬೆಂಗಳೂರಿಗೆ ತರಿಸಿಕೊಂಡು ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶ್ರೀರಾಮ ದೇವರಿಗೆ ಅರ್ಪಿಸಿದೆ. ಆ ಕತ್ತಿಯನ್ನು ನಾನೇ ಇಟ್ಟುಕೊಳ್ಳಬಹುದಿತ್ತು. ಆದರೆ, ದೈವಸೇವೆ ನಮ್ಮ ನಂಬಿಕೆ. ಅದನ್ನೇ ಮಾಡಿದೆ ಎಂದು ಅವರು ಹೇಳಿದರು.
ಬಳಿಕ, ಅಲ್ಲಿ ಮೋದಿ ಅವರು ಶ್ರೀರಾಮ ಅಂತಾರೆ. ಉಪವಾಸ, ನದಿಸ್ನಾನ, ತಣ್ಣೀರು ಸ್ನಾನ ಇವೆಲ್ಲ ಮಾಡುತ್ತಿದ್ದಾರೆ. ಇಲ್ಲಿ ಇವರಿಗೆ ಸಿದ್ದರಾಮ ಮಾತ್ರ. ಸಿದ್ದರಾಮ ಹೆಸರಿನಲ್ಲಿ NDA ಸೋಲಿಸಿ 20 ಸೀಟು ಗೆಲ್ಲುತ್ತೇವೆ ಅಹಂನಿಂದ ಇವೆಲ್ಲ ಸೃಷ್ಟಿ ಮಾಡ್ತಿದ್ದಾರೆ. 20 ಸೀಟು ಗೆಲ್ಲೋದು ಎಂದರೆ ಕನಸು ಮಾತ್ರ. ಈ ಬಾರಿ ಮೋದಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನರು ಎನ್ ಡಿಎ ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ ಎಂದು ಮಾಜಿ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕರಾದ ಲಿಂಗೇಶ್, ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.