Wednesday, January 22, 2025

ಗೋವಾದಲ್ಲಿ ಅಪರೂಪದ ಪ್ರಾಚೀನ ಕನ್ನಡ ಶಾಸನ ಪತ್ತೆ

ಮಂಗಳೂರು: ಕನ್ನಡ ಮತ್ತು ಸಂಸ್ಕೃತದಲ್ಲಿ ಬರೆಯಲಾದ ಮತ್ತು 10 ನೇ ಶತಮಾನದ ಕದಂಬರ ಕಾಲದ ಶಾಸನ ದಕ್ಷಿಣ ಗೋವಾದ ಕಾಕೋಡಾದಲ್ಲಿರುವ ಮಹಾದೇವ ದೇವಾಲಯದಲ್ಲಿ ಪತ್ತೆಯಾಗಿದೆ. 
ಉಡುಪಿ ಜಿಲ್ಲೆಯ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ ಟಿ.ಮುರುಗೇಶಿ ಅವರು ಶಾಸನವನ್ನು ಅಧ್ಯಯನ ಮಾಡಿದರು. ಮುರುಗೇಶಿಯವರ ಪ್ರಕಾರ, ಇದರ ಶಿಲಾಶಾಸನವನ್ನು ಕನ್ನಡ ಮತ್ತು ನಾಗರಿ ಅಕ್ಷರಗಳಲ್ಲಿ ಕೆತ್ತಲಾಗಿದೆ.
ಗೋವಾದ ಪರಿಸರ ಆಂದೋಲನದ ಹೋರಾಟಗಾರ ಡಾ.ರಾಜೇಂದ್ರ ಕೇರ್ಕರ್ ರವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ಗಮನಕ್ಕೆ ತಂದು, ಈ ಅಪರೂಪದ ಶಾಸನ ಸಂಶೋಧನೆಗೆ ಸಹಕಾರ ಮಾಡಿದ್ದಾರೆ.
ಈ ಶಾಸನವನ್ನು ಆಯತಾಕಾರದ ಶಿಲೆಯ ಮೇಲೆ ಕನ್ನಡ ಭಾಷೆ ಮತ್ತು ಲಿಪಿ ಹಾಗೂ ಸಂಸ್ಕೃತ ಭಾಷೆ ಮತ್ತು ನಾಗರಿ ಲಿಪಿಯಲ್ಲಿ ಬರೆಯಲಾದ ದ್ವಿಭಾಷಾ ಶಾಸನವಾಗಿದೆ. ಶಾಸನ ಸ್ವಸ್ತಿಶ್ರೀ ಎಂಬ ಮಂಗಲವಾಚಕ ಪದದೊಂದಿಗೆ ಆರಂಭವಾಗಿದೆ. ಗೋವಾದಲ್ಲಿನ ಒಂದು ಮಂಡಲದ ಆಳ್ವಿಕೆಯನ್ನು ನಡೆಸುತ್ತಿದ್ದ, ತಳಾರ ನೇವಯ್ಯ ಎಂಬುವನು ತನ್ನ ಮಗ ಗುಂಡಯ್ಯನ ಶೌರ್ಯ ಸಾಹಸವನ್ನು ದುಃಖದಿಂದ ಕೊಂಡಾಡುತ್ತಾ, ತನ್ನ ಆಸೆಯನ್ನು ಈಡೇರಿಸುವ ಪ್ರತಿಜ್ಞೆ ಮಾಡಿ, ಬಂದರು ನಗರ ಗೋಪುರವನ್ನು (ಈಗಿನ ಗೋವಾ) ವಶಪಡಿಸಿಕೊಂಡು, ತನ್ನ ತಂದೆಯ ಆಸೆಯನ್ನು ಈಡೇರಿಸಿ ವೀರಮರಣವನ್ನು ಹೊಂದಿದ. ಮೃತ ಗುಂಡಯ್ಯನ ವೀರಸ್ಮಾರಕವಾಗಿ ನೇವಯ್ಯನು ಈ ವೀರಶಾಸನವನ್ನು ಕಾಕೋಡದ ಮಹಾದೇವಾಲಯದ ಆವರಣದಲ್ಲಿ ನಿಲ್ಲಿಸಿದ ಸಂಗತಿಯನ್ನು ಶಾಸನದಲ್ಲಿ ದಾಖಲಿಸಲಾಗಿದೆ.

ಶಾಸನದ ಮಹತ್ವ: 

ಶಾಸನವನ್ನು 10 ನೇ ಶತಮಾನದ ಲಿಪಿಯಲ್ಲಿ ಬರೆಯಲಾಗಿದೆ. ಶಾಸನದಲ್ಲಿ ಯಾವುದೇ ರಾಜಮನೆತನ ಹಾಗೂ ಕಾಲದ ಉಲ್ಲೇಖ ಕಂಡುಬರುವುದಿಲ್ಲ. ಕರ್ನಾಟಕದ ಕದಂಬರು, ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನಿಗೆ ರಾಷ್ಟ್ರಕೂಟರನ್ನು ಪದಚ್ಯುತಗೊಳಿಸುವಲ್ಲಿ ನೆರವಾಗಿದ್ದರು. ಆದ್ದರಿಂದ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನು ಕದಂಬ ರಾಜಮನೆತನದ ಶಾಸ್ತದೇವನನ್ನು ಗೋವಾದ ಮಹಾಮಂಡಲೇಶ್ವರನೆಂದು ನೇಮಿಸಿದನು. ಗೋವಾದ ಶಿಲಾಹಾರರಿಂದ ಚಂದಾವರವನ್ನು ವಶಪಡಿಸಿಕೊಂಡ ಕದಂಬ ಶಾಸ್ತದೇವನು ಕ್ರಿ.ಶ. 960 ರಲ್ಲಿ  ಗೋವಾದ ಚಂದಾವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಗೋವಾದಲ್ಲಿ ಸ್ವತಂತ್ರ ಕದಂಬ ರಾಜಮನೆತನದ ಆಳ್ವಿಕೆಯನ್ನು ಆರಂಭಿಸಿದನು. ನಂತರ ಬಂದರು ನಗರ ಗೋಪುರಪಟ್ಟಣವನ್ನು ವಶಪಡಿಸಿಕೊಂಡು ಸಂಪೂರ್ಣ ದಕ್ಷಿಣ ಗೋವಾದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದನು. ಶಾಸನದಲ್ಲಿ ಗೋಪುರಪಟ್ಟಣವನ್ನು ಗೆದ್ದ ಗುಂಡಯ್ಯನ ಸಾಹಸವನ್ನು ನೆನೆಯಲಾಗಿದೆ. ಮೃತ ಗುಂಡಯ್ಯನ ತಂದೆಯನ್ನು ತಳಾರ ನೇವಯ್ಯನೆಂದು ವರ್ಣಿಸಲಾಗಿದೆ. ತಳಾರ ಎಂದರೆ ಸೇವಕ ಎಂಬ ಅರ್ಥವಿದೆ. ಆದ್ದರಿಂದ ಶಾಸನೋಕ್ತ ತಳಾರ ನೇವಯ್ಯನು ಗೋವಾ ಕದಂಬರ ಸಾಮಂತನಾಗಿ ಒಂದು ಮಂಡಲದ ಅಧಿಪತಿಯಾಗಿ ಆಳ್ವಿಕೆ ನಡೆಸುತ್ತಿದ್ದ ಎಂದೂ, ಕದಂಬ ಶಾಸ್ತದೇವನ ಗೋಪುರಪಟ್ಟಣದ ಮೇಲಿನ ದಾಳಿಯಲ್ಲಿ ನೇವಯ್ಯನ ಆಸೆಯಂತೆ ಆತನ ಮಗ ಗುಂಡಯ್ಯ ಭಾಗವಹಿಸಿ ಗೋಪುರಪಟ್ಟಣವನ್ನು ಗೆದ್ದು ವೀರಮರಣ ಹೊಂದಿದ ಎಂದು ಭಾವಿಸಬಹುದಾಗಿದೆ. ಗೋವಾ ಕದಂಬರ ಆಳ್ವಿಕೆಯ ಆರಂಭಿಕ ಕಾಲದ ಲಿಪಿಲಕ್ಷಣವನ್ನು ಶಾಸನದ ಲಿಪಿಗಳು ಸಂಪೂರ್ಣವಾಗಿ ಹೋಲುವುದರಿಂದ ಶಾಸನದ ಕಾಲವನ್ನು ಕ್ರಿ.ಶ. 10 ನೇ ಶತಮಾನದ ಶಾಸನವೆಂದು ನಿರ್ಧರಿಸಲಾಗಿದೆ.

ಶಾಸನದ ಪಠ್ಯ:

ಈ ಶಾಸನದ ಪಠ್ಯವನ್ನು ಸಿದ್ಧಪಡಿಸುವಲ್ಲಿ, ಸಂಶೋಧಿಸುವಲ್ಲಿ ಹಾಗೂ ಅರ್ಥೈಸುವಲ್ಲಿ ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಕರಾದ ಡಾ. ಮುನಿರತ್ನ ರೆಡ್ಡಿ, ಡಾ. ನಾಗರಾಜಪ್ಪ ಮತ್ತು ರ‍್ಕೆ ಮಣಿಪಾಲ್ ಇವರ ಸಹಕಾರವನ್ನು ಪಡೆಯಲಾಗಿದೆ ಎಂದು ಪ್ರೊ. ಟಿ.ಮುರುಗೇಶಿ ತಿಳಿಸಿದ್ಧಾರೆ.

 

RELATED ARTICLES

Related Articles

TRENDING ARTICLES