Sunday, December 22, 2024

ವಿಜಯಪುರ ಲೋಕಸಭಾ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು..!

ಬೆಂಗಳೂರು : ಜೆಡಿಎಸ್ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಹಾಗೆಯೇ, ಭವಿಷ್ಯದ ದೃಷ್ಟಿಯಿಟ್ಟುಕೊಂಡೇ ಸೀಟು ಹಂಚಿಕೆ ಲೆಕ್ಕಾಚಾರ ಹಾಕುತ್ತಿದೆ. ಉತ್ತರ ಕರ್ನಾಟಕದ ಮಹತ್ವದ ಕ್ಷೇತ್ರದ ಮೇಲೆ ದಳಪತಿಗಳು ಕಣ್ಣಿಟ್ಟಿದ್ದು ಗೆಲ್ಲುವ ಲೆಕ್ಕಾಚಾರ ಹಾಕುತ್ತಿದ್ದಾರೆ.

ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಅನ್ನುವ ಮಾತಿತ್ತು. ಯಾಕಂದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್​ಗೆ ಹೆಚ್ಚು ಶಕ್ತಿ ವೃದ್ದಿಸಿಕೊಳ್ಳಲು ಆಗಿಲ್ಲ. ಅಂದಹಾಗೆ ಅಲ್ಲಿ ಶಕ್ತಿಯೇ ಇಲ್ಲ ಅಂತ ಇಲ್ಲ. ಉತ್ತರ ಕರ್ನಾಟಕದಲ್ಲಿ ಮೂರು ಜೆಡಿಎಸ್ ಶಾಸಕರು ಗೆದ್ದಿದ್ದಾರೆ. ಹೀಗಾಗಿ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾಬಲ್ಯ ಸಾಧಿಸಬೇಕಾದ್ರೆ ಲೋಕಸಭೆ ಗೆಲ್ಲಬೇಕು. ಹೀಗಾಗಿ, ದೇವೇಗೌಡರು ಬಿಜೆಪಿ ಹೈಕಮಾಂಡ್ ಬಳಿ ಮಹತ್ವದ ದಾಳವನ್ನು ಉರುಳಿಸಿದ್ದಾರೆ. ಅದೇ ವಿಜಯಪುರ ಲೋಕಸಭಾ ಕ್ಷೇತ್ರ.‌

ಹೌದು, ಉತ್ತರ ಕರ್ನಾಟಕದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗಿಂತಲೂ ವಿಜಯಪುರದಲ್ಲಿ ಜೆಡಿಎಸ್ ಹೆಚ್ಚು ಪ್ರಾಬಲ್ಯ ಹೊಂದಿದೆ. ವಿಜಯಪುರದ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹಾಗೆಯೇ ಇಂಡಿ, ಬಸವನಬಾಗೇವಾಡಿಯಲ್ಲಿ ಜೆಡಿಎಸ್​ಗೆ ತನ್ನದೇ ಆದ ಮತಗಳು ಇದೆ. ನಾಗಾಠಾಣಯಲ್ಲಿ 2018ರಲ್ಲಿ ಜೆಡಿಎಸ್​ನ ದೇವಾನಂದ್ ಚೌಹಾಣ್ ಗೆದ್ದಿದ್ದು ಶಕ್ತಿ ಹೆಚ್ಚಿದೆ.

ಸುನೀತಾ ಚೌಹಾಣ್​ಗೆ ವಿಜಯಪುರ ಟಿಕೆಟ್

ಹೀಗಾಗಿ, ವಿಜಯಪುರ ಲೋಕಸಭೆಗೆ ನಾಗಾಠಾಣದ ಮಾಜಿ ಶಾಸಕ ದೇವಾನಂದ್ ಚೌಹಾಣ್ ಪತ್ನಿ ಸುನೀತಾ ಚೌಹಾಣ್​ಗೆ ಟಿಕೆಟ್ ನೀಡಲು ಜೆಡಿಎಸ್ ದಳಪತಿಗಳು ಪ್ಲ್ಯಾನ್ ಮಾಡಿದ್ದಾರೆ. ಕಾರಣ ಕಳೆದ ಭಾರಿ ಕೈ ಹಾಗೂ ದಳ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುನೀತಾ ಚೌಹಾಣ್ 4 ಲಕ್ಷಕ್ಕೂ ಅಧಿಕ ಮತ ಪಡೆದಿದ್ರು. ಈ ಬಾರಿ ಎನ್​ಡಿಎ ಮೈತ್ರಿಕೂಟ ಇರೋದ್ರಿಂದ ಬಿಜೆಪಿ ಶಕ್ತಿ ಸೇರಿದ್ರೆ ಗೆಲುವು ಸುಲಭ ಎಂದು ದಳಪತಿಗಳು ಲೆಕ್ಕಾಚಾರ ಹಾಕಿದ್ದಾರೆ.

ಮೈತ್ರಿ ಧರ್ಮ ಪಾಲಿಸಿದ್ರೆ ಗೆಲುವು ಸುಲಭ

ದೇವೇಗೌಡರು ಅಧಿಕಾರದಲ್ಲಿ ಇದ್ದಾಗ ಕೃಷ್ಣಾ ಮೇಲ್ಡಂಡೆ ಯೋಜನೆ ಮಾಡಿ ವಿಜಯಪುರ ಸೇರಿ ಉತ್ತರ ಕರ್ನಾಟಕಕ್ಕೆ ನೇರವಾಗಿದ್ರು. ಹೀಗಾಗಿ, ಈ ಭಾಗದಲ್ಲಿ ದೇವೇಗೌಡರಿಗೆ ತನ್ನದೇ ಆದ ವೋಟ್ ಬ್ಯಾಂಕ್ ಇದೆ. ಹಾಗೆಯೇ ಜೆಡಿಎಸ್ ಬಲ ಕಡಿಮೆಯಿರೋ ಕ್ಷೇತ್ರದಲ್ಲಿ ಬಿಜೆಪಿಗೆ ತನ್ನದೇ ಆದ ಶಕ್ತಿಯಿದ್ದು ಮೈತ್ರಿ ಧರ್ಮವನ್ನು ಪಾಲಿಸಿದ್ರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಜೆಡಿಎಸ್ ನಾಯಕರಿಗೆ ಇದೆ. ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಿದ್ರೂ ಕಾಂಗ್ರೆಸ್ ಬಲ ಹೆಚ್ಚಿರೋದ್ರಿಂದ ಗೆಲುವು ಅಷ್ಟು ಸುಲಭ ಅಲ್ಲ. ಹೀಗಾಗಿ ಕೋಲಾರ ಲೋಕಸಭಾ ಕ್ಷೇತ್ರದ ಬದಲಿಗೆ ವಿಜಯಪುರ ಕ್ಷೇತ್ರಕ್ಕೆ ಬೇಡಿಕೆ ಇಡೋ ಬಗ್ಗೆ ಜೆಡಿಎಸ್ ಚಿಂತನೆ ನಡೆಸುತ್ತಿದೆ.

ಜೆಡಿಎಸ್​ಗೆ ವಿಜಯಪುರ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಜೆಡಿಎಸ್ ನದ್ದು, ಹೀಗಾಗಿ ದೇವೇಗೌಡರು ಬಿಜೆಪಿ ಹೈಕಮಾಂಡ್ ಮುಂದೆ ಪಟ್ಟುಹಿಡಿಯಲು ಸಿದ್ದರಾಗಿದ್ದಾರೆ.

RELATED ARTICLES

Related Articles

TRENDING ARTICLES