ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಹಿಂದೆ ಬಿಜೆಪಿ ಸರ್ಕಾರವೇ ಬಂದಿಸಿದ್ದು, ಅವರು ಹಿಂದೂ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕರಸೇವಕರ ಪರ ಬಿಜೆಪಿಗರ ಪ್ರತಿಭಟನೆಗೆ ಕಿಡಿಕಾರಿರುವ ಅವರು, ಕ್ರಿಮಿನಲ್ ಆರೋಪಿಯೊಬ್ಬನನ್ನು ಬಿಜೆಪಿ ಬೆಂಬಲಿಸುತ್ತಿದೆ. ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚೋದು ಅತ್ಯಂತ ಅಪಾಯಕಾರಿ ಎಂದು ಕುಟುಕಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಲೋಕಾಯುಕ್ತ ಪೊಲೀಸರು ಅಂದಿನ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸಿದ್ರು. ಯಡಿಯೂರಪ್ಪಗಿಂತ ದೊಡ್ಡ ಹಿಂದೂ, ರಾಮಭಕ್ತ ಯಾರಿದ್ದಾರೆ? ಆಗಿನ ಬಿಜೆಪಿ ಸರ್ಕಾರ ಹಿಂದೂ ವಿರೋಧಿಯೇ? ಆಗ ಹಿಂದೂ ವಿರೋಧಿ ಎಂದು ಕೂಗಾಡಿಲ್ಲ, ಈಗ ಯಾಕೆ ಕೂಗಾಟ? ಒಬ್ಬ ಕ್ರಿಮಿನಲ್ ನನ್ನು ಸಮರ್ಥಿಸುವ ದುಸ್ಥಿತಿ ಬಿಜೆಪಿಗೆ ಬರಬಾರದಿತ್ತು ಎಂದು ಚಾಟಿ ಬೀಸಿದ್ದಾರೆ.
ಹಿಂದೂಗಳೇ ಹೆಚ್ಚು ಜೈಲಿನಲ್ಲಿದ್ದಾರೆ
ಜನಸಂಖ್ಯೆಯಲ್ಲಿ ಹೆಚ್ಚಿರೋ ಹಿಂದೂಗಳು ಜೈಲಿನಲ್ಲೂ ಹೆಚ್ಚಿದ್ದಾರೆ. ಅವರ ಪರ ಬಿಜೆಪಿ ಹೋರಾಟ ನಡೆಸುತ್ತಾ? ವ್ಯಕ್ತಿ ಘನಗೋರ ಅಪರಾಧ ಮಾಡಿ ಕೇಸರಿ ಶಾಲು ಹಾಕಿಕೊಂಡರೇ ಬಿಜೆಪಿ ಬೆಂಬಲಿಸುತ್ತದೆ. ಈ ಮೂಲಕ ಬಿಜೆಪಿ ಹಿಂದೂ ಧರ್ಮಕ್ಕೆ ಅವಮಾಮ ಮಾಡ್ತಿದ್ದಾರೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ದಿನಕ್ಕೊಂದು ಗಂಭೀರ ಸ್ವರೂಪದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಕನಿಷ್ಠ ಒಂದು ಎಚ್ಚರಿಕೆಯ ನೋಟಿಸ್ ನೀಡಲಾಗದಷ್ಟು ಪಕ್ಷ ಅಸಹಾಯಕವಾಗಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.