Friday, May 17, 2024

ಕಾಯಂಗೆ ಅತಿಥಿ ಉಪನ್ಯಾಸಕರ ಒತ್ತಾಯ: ಇಂದಿನಿಂದ ಪಾದಯಾತ್ರೆ ಆರಂಭ

ಬೆಂಗಳೂರು: ಸರ್ಕಾರದ ಪರ್ಯಾಯ ವ್ಯವಸ್ಥೆಯ ಬೆದರಿಕೆ ಅಸ್ತ್ರಕ್ಕೆ ಜಗ್ಗದ ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘಟನೆಗಳು ಸೇವೆ ಕಾಯಂಗೆ ಆಗ್ರಹಿಸಿ ನಿಗದಿಯಂತೆ ಸೋಮವಾರ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸುವುದಾಗಿ ತಿಳಿಸಿವೆ.

ಹೌದ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ಸೂಕ್ತ ಯೋಜನೆ ರೂಪಿಸುವುದಾಗಿ ಕಾಂಗ್ರೆಸ್‌ ಪಕ್ಷ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ನಾವು ಸರ್ಕಾರಕ್ಕೆ ಕೇಳುತ್ತಿದ್ದೇವೆ. ಹತ್ತು ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಭದ್ರತೆ ಕೊಡಿ ಎಂದು ಕೇಳುವುದು ನಮ್ಮ ಹಕ್ಕು.

ಅದಕ್ಕಾಗಿ ಕಳೆದ ಒಂದು 39 ದಿನಗಳಿಂದ ತರಗತಿ ಬಹಿಷ್ಕರಿಸಿ ನಾವು ಮುಷ್ಕರ ನಡೆಸುತ್ತಿದ್ದರೂ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಪಾದಯಾತ್ರೆ ಮೂಲಕ ಹೋರಾಟ ತೀವ್ರಗೊಳಿಸಲು ನಾವು ತೀರ್ಮಾನಿಸಿದ್ದೇವೆ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ತಿಳಿಸಿದ್ದಾರೆ.

ಇದನ್ನೂ ಓದಿ: Double Murder : ಹೊಸ ವರ್ಷದ ಮೊದಲ ದಿನವೇ ಹರಿಯಿತು ನೆತ್ತರು ; ಕ್ಷುಲ್ಲಕ ಕಾರಣಕ್ಕೆ…

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಸದನದಲ್ಲೇ ಅಂದಿನ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದರು. ಈ ಸಂಬಂಧ ವಿಡಿಯೋ ಎಲ್ಲ ಕಡೆ ವೈರಲ್‌ ಆಗಿದೆ. ಈಗ ಅಧಿಕಾರಕ್ಕೆ ಬಂದಾಗ ಅದೇ ಮಾತಿನ ಮೇಲೆ ತಮ್ಮ ಸರ್ಕಾರ ಏಕೆ ನಿಲ್ಲುವುದಿಲ್ಲ? ಜೊತೆಗೆ ಪ್ರಣಾಳಿಕೆಯಲ್ಲೂ ಈ ಬಗ್ಗೆ ಭರವಸೆ ನೀಡಿದ್ದೀರಿ. ಹಾಗಾಗಿ ನುಡಿದಂತೆ ನಡೆಯುವ ಸರ್ಕಾರ ತಮ್ಮದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿ ಎಂಬುದು ನಮ್ಮ ಆಗ್ರಹ ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಬೆಳಗ್ಗೆ 10 ಗಂಟೆಗೆ ತುಮಕೂರಿನ ಸಿದ್ಧಗಂಗಾ ಮಠದಿಂದ ಪಾದಯಾತ್ರೆ ಆರಂಭವಾಗಲಿದೆ. ಸುಮಾರು 10 ಸಾವಿರ ಅತಿಥಿ ಉಪನ್ಯಾಸಕರು ಭಾಗವಹಿಸಲಿದ್ದಾರೆ. ಜ.3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ತಲುಪಿ ಅಲ್ಲಿ ಬೃಹತ್‌ ಸಮಾವೇಶ ನಡೆಸುತ್ತೇವೆ. ನಮಗೆ ಬೆಂಬಲ ನೀಡಲು ವಿದ್ಯಾರ್ಥಿಗಳು, ಹೋರಾಟಗಾರರು, ಆಟೋ ಚಾಲಕರು ಸೇರಿ ಬೇರೆ ಬೇರೆ ಸಂಘಟನೆಗಳನ್ನೂ ಕೋರಿದ್ದೇವೆ ಎಂದು ತಿಳಿಸಿದ್ದಾರೆ.

 

 

 

RELATED ARTICLES

Related Articles

TRENDING ARTICLES