Wednesday, January 22, 2025

ಅಂದು ಸಾರಥಿ.. ಇಂದು ಕಾಟೇರ.. ದರ್ಶನ್​ ಗೆ ಟ್ವಿಸ್ಟ್​: ಪವರ್​ ರೇಟಿಂಗ್-4/5

ಫಿಲ್ಮಿ ಡೆಸ್ಕ್​: ದಿ ವೆಯ್ಟ್ ಈಸ್ ಓವರ್.. ಎಲ್ಲರೂ ಎದುರು ನೋಡ್ತಿದ್ದ ಕಾಟೇರ ಸಿನಿಮಾ, ಬೆಳ್ಳಿತೆರೆ ಬೆಳಗೋ ಮೂಲಕ ಲಕ್ಷಾಂತರ ಮಂದಿ ಚಿತ್ರಪ್ರೇಮಿಗಳಿಗೆ ದರ್ಶನ ನೀಡಿದೆ. ನಟ ದರ್ಶನ್ ಪಾಲಿಗೆ ಮೆಜೆಸ್ಟಿಕ್, ಸಾರಥಿ ಹೇಗೆ ಇಂಪಾರ್ಟೆಂಟ್ ಸಿನಿಮಾಗಳು ಆದವೋ, ಅದೇ ರೀತಿ ಕಾಟೇರ ಕೂಡ ಮತ್ತೊಂದು ಮಾಸ್ಟರ್​ಪೀಸ್ ಸಿನಿಮಾ ಆಗಿ ರೂಪುಗೊಂಡಿದೆ.

ನಿರ್ದೇಶನ: ತರುಣ್ ಸುಧೀರ್, ನಿರ್ಮಾಣ: ರಾಕ್​ಲೈನ್ ವೆಂಕಟೇಶ್, ಸಂಗೀತ: ವಿ.ಹರಿಕೃಷ್ಣ, ಸಿನಿಮಾಟೋಗ್ರಫಿ: ಸುಧಾಕರ್.ಎಸ್.ರಾಜ್, ತಾರಾಗಣ: ದರ್ಶನ್, ಆರಾಧನಾ ರಾಮ್, ಶ್ರುತಿ, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಜಗಪತಿ ಬಾಬು, ಮಾಸ್ಟರ್ ರೋಹಿತ್, ಬಿರಾದಾರ್, ಅಚ್ಯುತ್, ರವಿ ಚೇತನ್ ಮುಂತಾದವರು.

ಇದನ್ನೂ ಓದಿ: ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ ಮೋದಿಯನ್ನು ಅಭಿನಂದಿಸಿದ ಹೆಚ್.ಡಿ.ಕುಮಾರಸ್ವಾಮಿ

ಕಾಟೇರ ಸ್ಟೋರಿಲೈನ್ :

70ರ ದಶಕದ ಕಾಲಘಟ್ಟದ ಈ ಕಥೆಗೆ ಭೀಮನಹಳ್ಳಿ ಅನ್ನೋ ಗ್ರಾಮವೇ ಮೂಲ. ಅಲ್ಲಿ ಕುಲುಮೆ ಕೆಲಸ ಮಾಡೋ ಯುವಕ ಕಾಟೇರ. ದುಡಿಮೆಯೇ ದೇವ್ರು ಅಂತ ನಂಬಿರೋ ಆ ವ್ಯಕ್ತಿ ಹಾಗೂ ಇಡೀ ಊರಿನ ಜನತೆಯ ಮೇಲೆ ಜಮೀನ್ದಾರರ ದಬ್ಬಾಳಿಕೆ ಅತಿರೇಕಕ್ಕೇರುತ್ತೆ. ಅನ್ನ ಕೊಡೋ ರೈತನೇ ಹಸಿದುಕೊಂಡು ಇರೋ ಪರಿಸ್ಥಿತಿ, ಬದಲಾಗದ ಮೇಲ್ಜಾತಿ ಕೆಳಜಾತಿ ಅನ್ನೋ ಮನಸ್ಥಿತಿ. ಅಂತಹ ಕಷ್ಟದಲ್ಲಿ ಬದುಕೋ ಊರಿನವರ ಪರ ನಿಂತು ದಬ್ಬಾಳಿಕೆಯ ವಿರುದ್ಧ ಸಮರ ಸಾರುವ ಕಾಟೇರನ ಜರ್ನಿಯೇ ಈ ಸಿನಿಮಾದ ಒನ್​ಲೈನ್ ಸ್ಟೋರಿ.

ಕುಲುಮೆ ಕೆಲಸ ಆಯುಧಗಳಿಗಿಂತ ಆ ಊರಿನಲ್ಲಿರೋ ಸಾಮಾಜಿಕ ಸಮಸ್ಯೆಗಳಿಗೇನೇ ಜಾಸ್ತಿ ಅವಶ್ಯಕತೆ ಇತ್ತು. ಒಂದ್ಕಡೆ ಪ್ರೀತಿ, ಮತ್ತೊಂದ್ಕಡೆ ಕುಟುಂಬದ ಜೊತೆ ಜೊತೆಗೆ ಸರ್ಕಾರದ ಕಾನೂನು ಕಟ್ಟಲೆಗಳ ಉಪಯೋಗ, ದುರುಪಯೋಗದ ಸುತ್ತ ಕಾಟೇರ ನಿಂತಿದೆ. ಕೇಳೋಕೆ ಸಾಮಾನ್ಯ ಕತೆ ಅನಿಸಿದ್ರೂ, ನಿರ್ದೇಶಕರು ಹೇಳಿರೋ ಪರಿ ಮಾತ್ರ ಅಸಾಮಾನ್ಯವಾಗಿದೆ.

ದರ್ಶನ್ ತಮ್ಮ ಸ್ಟಾರ್​ಗಿರಿ ಪಕ್ಕಕ್ಕಿಟ್ಟು ಸಿನಿಮಾದ ಪಾತ್ರದಲ್ಲಿ ಜೀವಿಸಿದ್ದಾರೆ. ಕಾಟೇರನಾಗಿ ಎರಡು ಶೇಡ್ಸ್​​ನಲ್ಲಿ ನೋಡುಗರ ಹುಬ್ಬೇರಿಸುತ್ತಾರೆ. ಕುಲುಮೆಯಲ್ಲಿ ಮಚ್ಚು ತಟ್ಟೋ ದರ್ಶನ್, ದಬ್ಬಾಳಿಕೆ ಮಾಡೋರ ಮೈ ತಟ್ಟೋದ್ರ ಜೊತೆ ಪ್ರೇಮಿಯಾಗಿ, ಭಾವುಕ ಜೀವಿಯಾಗಿ, ಊರ ಕಾಯೋ ಒಡೆಯನಾಗಿ, ಒಂದಷ್ಟು ದೃಶ್ಯಗಳಲ್ಲಿ ಮೌನವಾಗಿರೋದು ಕೂಡ ಅವ್ರ ನಟನೆಯ ಗಮ್ಮತ್ತು ಹೆಚ್ಚಿಸಿದೆ.

ಶಾನುಭೋಗರ ಮಗಳು ಪ್ರಭಾವತಿ ಪಾತ್ರದಲ್ಲಿ ಆರಾಧನಾ ನಿಜಕ್ಕೂ ಪ್ರೇಕ್ಷಕರು ಆರಾಧಿಸೋ ರೇಂಜ್​ಗೆ ಅಭಿನಯ ನೀಡಿದ್ದಾರೆ. ಮಾಲಾಶ್ರೀ- ಕೋಟಿ ರಾಮು ಪುತ್ರಿಗೆ ಇದು ಚೊಚ್ಚಲ ಚಿತ್ರವಾದ್ರೂ ನುರಿತ ಕಲಾವಿದೆಯಂತೆ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತಾರೆ. ಭವಿಷ್ಯದ ಭರವಸೆಯ ಸ್ಟಾರ್ ನಟಿ ಆಗೋದ್ರಲ್ಲಿ ಡೌಟೇ ಇಲ್ಲ.

ಕಾಟೇರನ ಅಕ್ಕ ಬಾವನಾಗಿ ಹಿರಿಯ ನಟಿ ಶ್ರುತಿ, ಕುಮಾರ್ ಗೋವಿಂದ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಶಾನುಭೋಗರಾಗಿ ಅವಿನಾಶ್, ಕಾಟೇರನ ತಾಯಿಯಾಗಿ ಪದ್ಮ ವಾಸಂತಿ, ಚೊಂಗ್ಲ ಪಾತ್ರದಲ್ಲಿ ಬಿರಾದಾರ್, ಮಾಸ್ಟರ್ ರೋಹಿತ್, ಖಳನಾಯಕರಾಗಿ ಜಗಪತಿ ಬಾಬು, ವಿನೋದ್ ಆಳ್ವಾ, ಮಾರನಾಗಿ ರವಿಚೇತನ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕಾಟೇರ ಪ್ಲಸ್ ಪಾಯಿಂಟ್ಸ್:

  • ದರ್ಶನ್, ಆರಾಧನಾ ನಟನೆ
  • ಮಾಸ್ತಿ ಬರವಣಿಗೆ, ಜಡೇಶ್ ಕಥೆ
  • ತರುಣ್ ಸುಧೀರ್ ನಿರ್ದೇಶನ & ನಿರೂಪಣೆ
  • ಸುಧಾಕರ್ ರಾಜ್ ಕ್ಯಾಮೆರಾ ಕೈಚಳಕ
  • ವಿ ಹರಿಕೃಷ್ಣ ಹಿನ್ನೆಲೆ ಸಂಗೀತ
  • 70ರ ದಶಕದ ಸಾಮಾಜಿಕ ಸಮಸ್ಯೆಗಳ ಎಳೆ

ಕಾಟೇರ ಮೈನಸ್ ಪಾಯಿಂಟ್ಸ್ :

ಮಗುವಿಗೆ ಹಾಲುಣಿಸಲು ಹೋದಾಗ ನಟಿ ಶ್ರುತಿ ಪಾತ್ರಕ್ಕಾಗುವ ಅಪಮಾನ, ಅಲ್ಲಿ ಬಳಸಿರೋ ಸಂಭಾಷಣೆಯಲ್ಲಿ ವಿನಾಯಿತಿ ಇರಬೇಕಿತ್ತು. ಅಲ್ಲದೆ, ಒಂದಷ್ಟು ದೃಶ್ಯಗಳು ತೆಲುಗಿನ ರಂಗಸ್ಥಳಂ ಹಾಗೂ ತಮಿಳಿನ ಅಸುರನ್ ಚಿತ್ರದ ದೃಶ್ಯಗಳನ್ನ ಹೋಲುತ್ತವೆ. ಉಳಿದಂತೆ ಕಾಟೇರ ನಿಜಕ್ಕೂ ವಿನೂತನ ಪ್ರಯೋಗ ಹಾಗೂ ಪ್ರಯತ್ನ.

ಕಾಟೇರನಿಗೆ ಪವರ್ ರೇಟಿಂಗ್: 4/5

ಕಾಟೇರ ಫೈನಲ್ ಸ್ಟೇಟ್​​ಮೆಂಟ್

ಮನರಂಜನೆಯೇ ಸಿನಿಮಾದ ಮೂಲ ಉದ್ದೇಶವಾದ್ರೂ ಸಹ ಮನೋವಿಕಾಸದ ಬೀಜ ಬಿತ್ತುವ ಕಾರ್ಯ ಕಾಟೇರ ಮಾಡಿದೆ. ಜಡೇಶ್ ಅವರ ಕಥೆಗೆ ರೆಕ್ಕೆ ಕಟ್ಟಿ, ಅದಕ್ಕೆ ಮೂರು ಗಂಟೆ ಮೂರು ನಿಮಿಷದ ದೃಶ್ಯರೂಪ ನೀಡುವಲ್ಲಿ ನಿರ್ದೇಶಕ ತರುಣ್ ಸುಧೀರ್ ಭೇಷ್ ಅನಿಸಿಕೊಂಡಿದ್ದಾರೆ. ಬಿಲ್ಡಪ್​ಗಳಿಲ್ಲದೆ, ಕಥೆಯನ್ನೇ ಹೀರೋ ಆಗಿಸಿಕೊಂಡು, ಅದಕ್ಕೆ ಒಬ್ಬ ದೊಡ್ಡ ಸೂಪರ್ ಸ್ಟಾರ್​ನ ತಂದು ಎಕ್ಸ್​ಪೆರಿಮೆಂಟ್ ಮಾಡೋ ಮೂಲಕ ತರುಣ್ ಮತ್ತೊಮ್ಮೆ ಅದ್ಭುತ ತಂತ್ರಜ್ಞನಾಗಿ ಕಾಣ್ತಾರೆ. ಇನ್ನು ಚಿತ್ರದ ಸಂಭಾಷಣೆ ಕಾಟೇರನ ತೂಕ ಹೆಚ್ಚಿಸಿದೆ. ಮಾಸ್ತಿ ಅವ್ರು ಕ್ಲಾಸ್ ಹಾಗೂ ಮಾಸ್ ದೃಶ್ಯಗಳಿಗೆ ಬೇಕಾಗುವಂತಹ ಡೈಲಾಗ್ಸ್​​ನ ಪೋಣಿಸಿರೋ ಪರಿ ಗ್ರೇಟ್. ಬಿರುಗಾಳಿಗೆ ಹೆದರಿ ಉಸಿರಾಡದೆ ಇರೋಕೆ ಆಗುತ್ತಾ..?, ನಿಮ್ಮ ಬಂದೂಕಿನ ಗುರಿ ನನ್ನ ಬದುಕಿನ ದಾರಿಯನ್ನ ತಪ್ಪಿಸೋಕೆ ಆಗಲ್ಲ, ಗಂಡಸಾದವ್ನು ಬೆವರು ಸುರಿಸ್ಬೇಕೇ ಹೊರತು ಜೊಲ್ಲು ಸುರಿಸಬಾರ್ದು ಅನ್ನೋ ಡೈಲಾಗ್​​​​ಗಳು ಬಹಳ ಅರ್ಥಪೂರ್ಣ ಅನಿಸುತ್ತವೆ.

ಒಟ್ಟಾರೆ ಇದೊಂದು ರೈತ ಕ್ರಾಂತಿಯ ಕಹಳೆ ಆಗಿದ್ದು, ಮಾಸ್ ಅಲ್ಲ ಸಮಾಜಕ್ಕೆ ಡಿ ಬಾಸ್ ಕ್ಲಾಸ್ ಅನ್ನುವಂತಿದೆ. ಈ ಕಾಟೇರ ‘ಎರಾ’ನ ತಂದುಕೊಟ್ಟ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವ್ರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಇನ್ನು ಕಾಸು ಕೊಟ್ಟು ಸಿನಿಮಾ ನೋಡೋನು, ಒಂದೊಳ್ಳೆ ಸಿನಿಮಾ ನೋಡಿದ ಸಾರ್ಥಕ ಭಾವದೊಂದಿಗೆ ಥಿಯೇಟರ್​ನಿಂದ ಹೊರಬರುವುದರಲ್ಲಿ ಸಂದೇಹವೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES