ಬೆಂಗಳೂರು : ಈ ಹಿಂದೆ ಸಿದ್ದರಾಮಯ್ಯ ಅವರು ದೇಶದ ಪ್ರಧಾನಿಗಳನ್ನು ನರಹಂತಕ ಅಂದಿದ್ದರು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಕಾಂಗ್ರೆಸ್ ಸರ್ಕಾರ ಇತರ ಪ್ರಕರಣಗಳ ಬಗ್ಗೆ ಮೌನ ವಹಿಸಿದೆ ಎಂದು ಕುಟುಕಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ಸರ್ಕಾರ ಅದನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಸ್ವಯಂಪ್ರೇರಿತ ಕೇಸುಗಳನ್ನು ದಾಖಲಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಮಗೆ ಈ ಕಾನೂನುಗಳು ಅನ್ವಯಿಸಲ್ವಾ?
ಸಚಿವ ಶಿವಾನಂದ ಪಾಟೀಲ್ ರೈತರ ನಿಂದನೆ ಮಾಡಿದ್ದರು. ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಕಾಂಗ್ರೆಸ್ ಸಚಿವರು ಮತೀಯ ಲೇಪನ ಹಚ್ಚಿದ್ದರು. ಅವರಿಗೇಕೆ ಈ ಕಾನೂನುಗಳು ಅನ್ವಯಿಸುವುದಿಲ್ಲ? ಸಿದ್ದರಾಮಯ್ಯ ಸರ್ಕಾರದ ಆಡಳಿತ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸವನ್ನು ಮತ್ತೆ ನೆನಪಿಸುವಂತಿದೆ ಎಂದು ಚಾಟಿ ಬೀಸಿದ್ದಾರೆ.
ಯುವಜನತೆಗೆ ಕಾಂಗ್ರೆಸ್ ವಂಚಿಸುತ್ತಿದೆ
ಯುವಜನತೆಗೆ ಸಿದ್ದರಾಮಯ್ಯ ಸರ್ಕಾರ ವಂಚಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿಯಲ್ಲಿ ಪದವಿ ಮತ್ತು ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಮಾಸಿಕ ತಲಾ 3 ಸಾವಿರ ಹಾಗೂ 1500 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಆದರೆ, ಇಂದು 2022-23 ರಲ್ಲಿ ತೇರ್ಗಡೆ ಹೊಂದಿದ 3 ರಿಂದ 4 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಯುವನಿಧಿ ಬಿಡುಗಡೆ ಮಾಡುವ ಮೂಲಕ ತಾರಮ್ಯದ ನಡೆ ಪ್ರದರ್ಶಿಸುತ್ತಿದೆ ಎಂದು ಹೇಳಿದ್ದಾರೆ.