ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಭರ್ಜರಿ ತಯಾರಿಗಳು ನಡೆಯುತ್ತಿದೆ. ಈ ನಡುವೆ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೂ ಮುನ್ನ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಹೌದು, ಉತ್ತರ ಪ್ರದೇಶದ ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಯೋಗಿ ಸರ್ಕಾರ ಘೋಷಿಸಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿ ಮಾಡಿದ ನಂತರ ಉತ್ತರ ಪ್ರದೇಶದ ಅಬಕಾರಿ ಸಚಿವ ನಿತಿನ್ ಅಗರ್ವಾಲ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Killer BMTC : ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಬಲಿ ಪಡೆದ ಬಿಎಂಟಿಸಿ
ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಅಲ್ಲದೇ ಈಗಾಗಲೇ ಇರುವಂತಹ ಮದ್ಯದಂಗಡಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗುವುದು ಎಂದು ಅಬಕಾರಿ ಸಚಿವರು ತಿಳಿಸಿದ್ದಾರೆ.
ಅಬಕಾರಿ ಇಲಾಖೆಗೆ ಸೂಚನೆ: ಅಯೋಧ್ಯೆಯ ಜೊತೆಗೆ ಫೈಜಾಬಾದ್, ಬಸ್ತಿ, ಅಂಬೇಡ್ಕರ್ ನಗರ ಮತ್ತು ಸುಲ್ತಾನ್‌ಪುರ ಪ್ರದೇಶಗಳು ಸಹ ಈ ವ್ಯಾಪ್ತಿಯಲ್ಲಿ ಬರುತ್ತವೆ. ಹೀಗಾಗಿ ಈ ಪ್ರದೇಶಗಳಲ್ಲಿಯೂ ಮದ್ಯ ಮಾರಾಟವನ್ನು ನಿಷೇಧಿಸಲಾಗುವುದು. ಅಲ್ಲಿರುವ ಮದ್ಯದಂಗಡಿಗಳನ್ನು ಕೂಡ ಸ್ಥಳಾಂತರಿಸಲಾಗುವುದು. ಅಂಗಡಿಗಳನ್ನು ಸ್ಥಳಾಂತರಿಸುವಂತೆ ಈಗಾಗಲೇ ಅಬಕಾರಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ನಿತಿನ್ ಅಗರ್ವಾಲ್ ತಿಳಿಸಿದ್ದಾರೆ.