Wednesday, January 22, 2025

ಫೇಸ್​ ಬುಕ್​ ಯೂಸ್​ ಮಾಡೋ ಮಹಿಳೆಯರೇ ಹುಷಾರ್​ ; ಸ್ವಲ್ಪ ಯಾಮಾರಿದ್ರು ಪಂಗನಾಮ ಗ್ಯಾರಂಟಿ.!

ಮಂಡ್ಯ: ನೀವು ಫೇಸ್ ಬುಕ್ ಯೂಸ್ ಮಾಡುತ್ತಿದ್ದೀರಾ..? ಹಾಗಿದ್ರೆ ನೀವು ಈ ಸುದ್ದಿಯನ್ನ ಓದಲೇಬೇಕು.

ಹೌದು,ಫೇಸ್‌ಬುಕ್‌ನಲ್ಲಿ ಮದುವೆಯಾದ ಮಹಿಳೆಯರು, ಅದರಲ್ಲಿಯು ವಿಧವೆಯರನ್ನೇ ಪರಿಚಯ ಮಾಡಿಕೊಂಡು ದೋಖಾ ಮಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಣ್ಣ ಬಣ್ಣದ ಮಾತಿನಿಂದ ಖೆಡ್ಡಾಗೆ ಬೀಳಿಸಿ ಮೋಸ ಮಾಡ್ತಿದ್ದ ಖತರ್ನಾಕ್ ವ್ಯಕ್ತಿಯ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ.

ಮಂಡ್ಯ ತಾಲೂಕಿನ ಚಂದಗಾಲು ನಿವಾಸಿ ರಂಜನ್ ಸುಮಾರು ಹತ್ತಾರು ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ. ತನಗೆ ಕಷ್ಟ ಇದೆ ಸಹಾಯ ಮಾಡಿ ಎಂದು ಚಿನ್ನಾಭರಣ ಪಡೆದು ಮೋಸ ಮಾಡಿದ್ದಾನೆ. ಚಿನ್ನಾಭರಣ ಪಡೆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದನು. ಈ ಬಗ್ಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.

ಫೇಸ್ ಬುಕ್​ನಲ್ಲಿ ಮಹಿಳೆಯರು, ವಿಧವೆಯರನ್ನ ಪರಿಚಯ ಮಾಡಿಕೊಂಡು ಮೋಸ

ಮಹಿಳೆಯ ದೂರಿನ ಅನ್ವಯ ಮಂಡ್ಯದ ಸೆಂಟ್ರಲ್ ಠಾಣೆ ಪೊಲೀಸರಿಂದ ಆರೋಪಿ ರಂಜನ್ ಬಂಧನವಾಗಿದೆ. ಬಂಧಿತನಿಂದ ಬರೋಬ್ಬರಿ 10 ಲಕ್ಷ ಮೌಲ್ಯದ 182 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ರಂಜನ್ ಬೆಂಗಳೂರು, ಮಂಡ್ಯ, ತುಮಕೂರು ಮೂಲದ ಮಹಿಳೆಯರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಇನ್ನು ಮಹಿಳೆಯರು ಮೋಸ ಹೋದ ಬಳಿಕ ಕುಟುಂಬಸ್ಥರಿಗೆ ಗೊತ್ತಾಗುತ್ತದೆ ಎಂದು ದೂರು ಕೊಡಲು ಹಿಂದೇಟು ಹಾಕುತ್ತಿದ್ದರು. ಆದರೆ ಮಹಿಳೆಯೊಬ್ಬಳು ಈ ಬಗ್ಗೆ ಠಾಣೆ ಮೆಟ್ಟಿಲೇರಿದ್ದ ಕಾರಣ ಆರೋಪಿ ರಂಜನ್​ ಪೊಲೀಸರಿಗೆ ಸಿಕ್ಕಿದ್ದಾನೆ.

ಇನ್ನು ಈ ಹಿಂದೆ ಕೂಡ ರಂಜನ್​ ಇದೇ ರೀತಿ ಪ್ರಕರಣದಲ್ಲಿ ಮಹಿಳೆಯರಿಗೆ ಮೋಸ ಮಾಡಿ ಜೈಲು ಪಾಲಾಗಿದ್ದನು. ಮತ್ತದೇ ಚಾಳಿ ಮುಂದುವರೆಸಿ ಜೈಲು ಪಾಲಾಗಿದ್ದಾನೆ. ಈತನಿಂದಾಗಿ ಚಿನ್ನಾಭರಣ ಕಳೆದುಕೊಂಡ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.

 

 

 

 

RELATED ARTICLES

Related Articles

TRENDING ARTICLES