ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್ ಮಾರ್ಗಸೂಚಿ ಇಲ್ಲ,ಬಿಗಿ ಭದ್ರತೆ ಮಾತ್ರ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.
ಮಾಧ್ಯಮ ಗೋಷ್ಠಿಯನ್ನು ಮಾತನಾಡಿದ ಅವರು,ಹೊಸ ವರ್ಷಾಚರಣೆಗೆ ಸಂಬಂಧಿಸಿ ಎರಡು ಸುತ್ತಿನ ಸಭೆ ಮಾಡಿದ್ದೇವೆ. ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಜೊತೆಗೆ ಚರ್ಚೆ ನಡೆಸಿದ್ದೇವೆ. ಚರ್ಚೆಗಳ ಒಟ್ಟು ಹಿನ್ನೆಲೆಗಳನ್ನು ಇಟ್ಟುಕೊಂಡು ಭದ್ರತೆ, ಸುರಕ್ಷತೆಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಗೈಡ್ಲೈನ್ಸ್ ಹೀಗಿದೆ
- ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಇಂದಿರಾ ನಗರ, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಸೂಕ್ತ ಬಂದೋಬಸ್ತ್ ನಿಯೋಜನೆ ಮಾಡಲಾಗುತ್ತದೆ.
- ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿ 15, ಎಸಿಪಿ 45, ಪೊಲೀಸ್ ಇನ್ಸ್ ಪೆಕ್ಟರ್ 160, ಪಿಎಸ್‌ಐ 600, ಎಎಸ್‌ಐ 600 ಸೇರಿ 5200 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ.
- ವರ್ಷಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಪೊಲೀಸ್ ಕಿಯೋಸ್ಕ್ ಗಳನ್ನು ತೆರೆಯಲಾಗುತ್ತದೆ.ತುರ್ತು ಪರಿಸ್ಥಿತಿಯಲ್ಲಿ ಸೇವೆ ಬಳಸಬಹುದಾಗಿದೆ.
- ಕಳೆದ ಬಾರಿ ವಿಪರೀತ ಮದ್ಯಪಾನ ಮಾಡಿ ಅವಾಂತರ ಮಾಡಿದವರನ್ನು ಠಾಣೆಗೆ ಕರೆಸಿ ವಾರ್ನಿಂಗ್ ಕೊಡಲಾಗಿದೆ.
- ಈ ಬಾರಿ ತಡರಾತ್ರಿ 1 ಗಂಟೆ ವರೆಗೆ ಅನುಮತಿ ನೀಡಲಾಗಿದೆ. ಈಗಾಗಲೆ ಕ್ಲಬ್, ಪಬ್ ಗಳ ಮಾಲೀಕರ ಜೊತೆ ಸಭೆ ಮಾಡಿದ್ದೇವೆ.
- ಏರ್ ಪೋರ್ಟ್ ರಸ್ತೆ ಹೊರತು ಪಡಿಸಿ ಫ್ಲೈ ಓವರ್‌ಗಳು ಡಿಸೆಂಬ್ 31ರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 6ರ ವರೆಗೂ ಬಂದ್ ಆಗಿರಲಿದೆ.
- ಎಂಜಿ ರಸ್ತೆ ಸುತ್ತಮುತ್ತ ರಾತ್ರಿ 8 ಗಂಟೆಯಿಂದ ತಡರಾತ್ರಿ 1 ಗಂಟೆಯವರೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿದೆ.
- ಭಾರಿ ವಾಹನಗಳ ಸಂಚಾರಕ್ಕೆ ರಾತ್ರಿ 11 ಗಂಟೆಯ ಬಳಿಕ ಅವಕಾಶ ಮಾಡಿಕೊಡಲಾಗುತ್ತದೆ.
- ವೀಲಿಂಗ್ ತಡೆಯುವುದಕ್ಕಾಗಿ 48 ಕಡೆ ನಾಕಾಬಂದಿ ಮಾಡಲಾಗುತ್ತದೆ.
- ಪ್ರತಿಯೊಂದು ಠಾಣೆಯಲ್ಲಿ ಕೂಡ ವಿಶೇಷ ತಂಡ ರಚನೆ ಮಾಡಲಾಗಿದೆ.
ಡಿಸೆಂಬರ್ 31ರ ರಾತ್ರಿ ಸಂಭ್ರಮಾಚರಣೆಗೆ ಅತಿ ಹೆಚ್ಚು ಜನ ಸೇರುವುದರಿಂದ ಮಾರ್ಗ ಸಂಚಾರ ಬದಲಾವಣೆಯನ್ನು ಮಾಡಲಾಗುತ್ತದೆ ಎಂದು ಹೇಳಿದ್ದರು.ಇನ್ನೂ ಸುದ್ದಿಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂಚಾರ ಎಂ ಎನ್ ಅನುಚೇತ್ ಉಪಸ್ಥಿತರಿದ್ದರು.