Wednesday, January 22, 2025

ಪತಿಯ ಎದೆಗೇ ಚೂರಿ ಹಾಕಿ ಕೊಂದ ಪತ್ನಿ

ಬೆಂಗಳೂರು: ಅನೈತಿಕ ಸಂಬಂಧದ ಸಂಶಯದಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. 

ಹೌದು, ರಾಜಧಾನಿಯಲ್ಲಿ ಪತ್ನಿಯೇ ತನ್ನ ಗಂಡನನ್ನು ಎದೆಗೆ ಚೂರಿ ಹಾಕಿ ಕೊಂದ ಭಯಾನಕ ಘಟನೆ ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಕಾಲೇಜಿನ ಬಳಿ ನಡೆದಿದೆ.

ಉಮೇಶ್ ದಾಮಿ (27) ಎಂಬಾತನನ್ನು ಆತನ ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ.

ಉಮೇಶ್‌ ದಾಮಿ ಮತ್ತು ಮನೀಷಾ ಹೊರರಾಜ್ಯದವರು. ಇಲ್ಲಿನ ಕಾಲೇಜಿನಲ್ಲಿ ಸೆಕ್ಯುರಿಟಿ ಹಾಗು ಹೌಸ್ ಕೀಪಿಂಗ್ ಕೆಲಸ‌ ಮಾಡುತ್ತಿದ್ದರು. ಕಾಲೇಜು ಆವರಣದಲ್ಲೇ ಅವರ ವಾಸವಿತ್ತು.

ಇದನ್ನೂ ಓದಿ: ಅನೈತಿಕ ಸಂಬಂಧದ ಬಗ್ಗೆ ಸಂಶಯ

ಬುಧವಾರ ರಾತ್ರಿ ಉಮೇಶ್‌ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ. ಕುಡಿತ ಎಲ್ಲ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಈ ವೇಳೆ ಮನಿಷಾ ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಕಂಡು ಮೊದಲೇ ಮತ್ತಿನಲ್ಲಿದ್ದ ಉಮೇಶನಿಗೆ ಸಿಟ್ಟು ನೆತ್ತಿಗೇರಿದೆ.

ಅನೈತಿಕ ಸಂಬಂಧದ ಬಗ್ಗೆ-ಪತಿಗೆ ಸಂಶಯ

ನಿನಗೆ ಯಾರೊಂದಿಗೋ ಅನೈತಿಕ ಸಂಬಂಧವಿದೆ. ಹೀಗಾಗಿ ನೀನು ಅವರ ಜತೆ ಈ ಮಧ್ಯರಾತ್ರಿಯಲ್ಲಿ ಮಾತನಾಡುತ್ತಿದ್ದೀಯಾ, ಯಾರದು ಹೇಳು ಎಂದು ಆತ ಆಕೆಯ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಗ ಅವರಿಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದೆ.

ತನ್ನ ಮೇಲೆ ಸಂಶಯ ವ್ಯಕ್ತಪಡಿಸಿದ್ದರಿಂದ ಕೆರಳಿದ ಮನೀಷಾ ಚಾಕು ತೆಗೆದುಕೊಂಡು ಬಂದು ಉಮೇಶ್ ದಾಮಿಗೆ ಇರಿದಿದ್ದಾಳೆ. ನೇರವಾಗಿ ಎದೆಗೇ ಚೂರಿಯಿಂದ ಇರಿದಿದ್ದರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಳಿಕ ಈ ವಿಷಯ ಹೊರಗಡೆ ತಿಳಿದು ಕೂಡಲೇ ಪೊಲೀಸರು ಆಗಮಿಸಿದರು. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹುಳಿಮಾವು ಪೊಲೀಸರು ಆರೋಪಿ ಮನಿಷಾಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES