ದೊಡ್ಡಬಳ್ಳಾಪುರ: ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 2024 ಜನವರಿ 21 ಭಾನುವಾರ ಮತ್ತು 22 ಸೋಮವಾರ ದಿನಗಳಂದು ನಡೆಯಲಿದೆ. ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಜನಪ್ರಿಯ ವೈದ್ಯರಾದ ದೊಡ್ಡತುಮಕೂರು ಗ್ರಾಮದವರಾದ ಡಾ.ಟಿ.ಎಚ್.ಆಂಜನಪ್ಪ ಅವರು ಸಮ್ಮೇಳನ ಅಧ್ಯಕ್ಷರಾಗಿದ್ದಾರೆ ಎಂದು ಶಾಸಕರು ಮತ್ತು ಸ್ವಾಗತ ಸಮಿತಿ ಅಧ್ಯಕ್ಷರಾದ ಧೀರಜ್ ಮುನಿರಾಜು ತಿಳಿಸಿದರು.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎರಡು ದಿನ ನಡೆಯುವ ದೊಡ್ಡಬಳ್ಳಾಪುರ ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜ.21 ರಂದು ಮೊದಲ ಧ್ವಜಾರೋಹಣ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಸಮ್ಮೇಳನ ಉದ್ಘಾಟನೆ, ವಿಚಾರಗೋಷ್ಠಿ, ಯುವಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.22 ರಂದು ಮಕ್ಕಳ ಗೋಷ್ಠಿ, ಮಹಿಳಾಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಇದನ್ನೂ ಓದಿ: ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಸಮಿತಿ ಶಿಫಾರಸು!
ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಸದಸ್ಯ ಪ್ರೇಮಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಮೊದಲಾದವರು ಮಾತನಾಡಿ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ. ಸಮ್ಮೇಳನದಲ್ಲಿ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಎಲ್ಲಾ ಸಹಕಾರ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ, ಕೋಶಾಧ್ಯಕ್ಷ ಡಾ.ಮುನಿರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಮಾಜಿ ಸದಸ್ಯರುಗಳು ಮತ್ತು ಗ್ರಾಮದ ಮುಖಂಡರು ಭಾಗವಹಿದ್ದರು.
ಸಮ್ಮೇಳನ ಅಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ ಪರಿಚಯ:
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ಹನುಮಂತರಾಯಪ್ಪ ಮತ್ತು ಲಕ್ಷ್ಮಿದೇವಮ್ಮ ದಂಪತಿಗಳಾದ ಮಗನಾದ ಡಾ.ಟಿ.ಎಚ್.ಆಂಜನಪ್ಪ ಪ್ರಾಥಮಿಕ ಶಿಕ್ಷಣವನ್ನು ದೊಡ್ಡತುಮಕೂರು ಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನಲ್ಲಿ, ವೈದ್ಯಕೀಯ ಶಿಕ್ಷಣವನ್ನು ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ಮಾಡಿದರು. ಹಲವಾರು ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಾ, ಜನಸಾಮಾನ್ಯರಿಗೆ ಆರೋಗ್ಯ ಜಾಗೃತಿಯನ್ನು ಕನ್ನಡ ಭಾಷೆಯಲ್ಲಿ ಮೂಡಿಸಿದರು.
ಇದನ್ನೂ ಓದಿ: ತಮ್ಮ ಹೆಸರು ಕೈ ಬಿಡುವಂತೆ ಕೋರಿ ಜಾಕ್ವೆಲಿನ್ ಕೋರ್ಟ್ಗೆ ಅರ್ಜಿ!
ತಮ್ಮ ಹಾಸ್ಯಭರಿತ ಕನ್ನಡ ಭಾಷಣದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ನೀಡಿದ್ದಾರೆ. ಕನ್ನಡ ವೈದ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಜೊತೆಗೆ ಹಲವಾರು ವೈದ್ಯಕೀಯ ಲೇಖನಗಳನ್ನು ಕನ್ನಡ ಭಾಷೆಯಲ್ಲಿ ಬರೆದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಲಂಡನ್ ಪತ್ರಿಕಾ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ.ಬಿ.ಸಿ.ರಾಯ್ ಪ್ರಶಸ್ತಿ ಸೇರಿದಂತೆ 50 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ಮಾಡಿವೆ.
ದೂರದರ್ಶನ ವಾಹಿನಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆಯಲ್ಲಿ ಆರೋಗ್ಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅರ್ಕಾವತಿ ನದಿ ಪಾತ್ರಗಳ ಕೆರೆಗಳ ಸಂರಕ್ಷಣೆ ಸಮಿತಿಯ ಅಧ್ಯಕ್ಷರಾಗಿರುವ ಡಾ.ಟಿ.ಎಚ್.ಆಂಜನಪ್ಪ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಸಮಸ್ಯೆಗಳನ್ನು ಕುರಿತು ನಡೆಯುತ್ತಿರುವ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬರುತ್ತಿದ್ದಾರೆ.