Monday, December 23, 2024

ದೇಶದಲ್ಲೇ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯ ನಮ್ಮದಾಗಬೇಕು: ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲೇ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯ ನಮ್ಮದಾಗಬೇಕು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಸಿರಿಧಾನ್ಯ ಬೆಳೆಯಲ್ಲಿ ಕರ್ನಾಟಕ, ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಕರ್ನಾಟಕ ದೇಶದಲ್ಲಿಯೇ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ದಿನ 2023 ಮತ್ತು ಮೇಳದ ಪೂರ್ವಭಾವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಸಿರಿಧಾನ್ಯಗಳ ಬಳಕೆಯ ಲಾಭಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಮೇಳಗಳು ಸಹಕಾರಿಯಾಗಿವೆ. ಸಾವಯವ ಕೃಷಿಯತ್ತ ಜನರು ಮುಖ ಮಾಡಿದ್ದು, ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಇಂದು ವಿಶ್ವದಲ್ಲಿ ಸಿರಿಧಾನ್ಯವನ್ನು ಹೆಚ್ಚು ಬಳಸಲಾಗುತ್ತಿದೆ. ಜನರಲ್ಲಿ ಹಾಗೂ ರೈತರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಇವುಗಳಿಗೆ ಮಾರುಕಟ್ಟೆ ಒದಗಿಸಬೇಕು. ಕಳೆದ 20 ವರ್ಷಗಳಿಂದ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಲಾಗುತ್ತಿದೆ. ಅದಕ್ಕೆ ಕೃಷಿ ಇಲಾಖೆಯವರು ಪೂರಕ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ” ಎಂದರು.

ಜನವರಿ 5,6,7 ಸಿರಿಧಾನ್ಯ ಮೇಳ

“ಸಾವಯವ ಕೃಷಿ ಪದ್ಧತಿ, ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನಲ್ಲಿ ಜನವರಿ 5, 6, 7 ರಂದು ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿದೆ” ಎಂದರು.

ಸಿರಿಧಾನ್ಯ ಆರೋಗ್ಯಕ್ಕೆ ಒಳ್ಳೆಯದು

“ಮೊದಲನೇ ಮೇಳ ನಡೆದಿದ್ದು 2017ರಲ್ಲಿ. ಆಗ ಕೃಷ್ಣ ಬೈರೇಗೌಡರು ಕೃಷಿ ಸಚಿವರಾಗಿದ್ದರು. 5 ವರ್ಷ ಸತತವಾಗಿ ಏರ್ಪಾಡು ಮಾಡಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮಾಡಲಾಗಿರಲಿಲ್ಲ. ಸಿರಿಧಾನ್ಯ ಬಹಳ ಬೇಡಿಕೆಯಲ್ಲಿರುವ ವಸ್ತು. ಮೊದಲು ರಾಗಿ, ಜೋಳ, ನವಣೆ, ಸಾಮೆ, ಆರ್ಕವನ್ನು ಬೆಳೆಯುತ್ತಿದ್ದೆವು. ನಂತರ ಕಡಿಮೆಯಾಗುತ್ತಾ ಬಂದಿತು. ಮಳೆ ಕಡಿಮೆಯಾಗುವ ಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಇತ್ತೀಚೆಗೆ ಸಿರಿಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದೆಂದು ಅರಿತಿರುವ ಜನ ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಕಾರ್ಬೊಹೈಡ್ರೇಟ್ಸ್ ಕಡಿಮೆಯಿದ್ದು, ಲವಣಾಂಶ ಮತ್ತು ನಾರಿನಂಶ ಹೇರಳವಾಗಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ” ಎಂದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಬಾಧ್ಯಕ್ಷರ ಯು ಟಿ ಖಾದರ್, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES