ಬೆಂಗಳೂರು: ಹಿರಿಯ ನಟಿ, ಡಾ. ಲೀಲಾವತಿ ಅವರ ಅಂತ್ಯಕ್ರಿಯೆ ಇಂದು(ಶನಿವಾರ) ಸಂಜೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಕುಟುಂಬಸ್ಥರು, ಚಿತ್ರರಂಗದ ಗಣ್ಯರು ಅಗಲಿದ ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದರು. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನ ಪಡೆದ ಹಾಲಿ, ಮಾಜಿ ಸಿಎಂ
ಮೂರು ಸುತ್ತಿನ ಕುಶಾಲ ತೋಪು ಸಿಡಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಕೆ:
ಕರ್ನಾಟಕ ಸರ್ಕಾರದ ಪರವಾಗಿ ಪೊಲೀಸ ಇಲಾಖೆ ಮೂರು ಸುತ್ತು ಕುಶಾಲುತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಹಲವು ನಾಯಕರು, ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಕೆ ಮಾಡಿದರು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಅನುರಾಧ.ಕೆ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಅರುಂಧತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.