ಹಾಸನ : ಕಾಂಗ್ರೆಸ್ ಪಕ್ಷದಲ್ಲಿ 40, 50 ಶಾಸಕರು ಪೂರ್ತಿಯಾಗಿ ಅಸಮಾಧಾನ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆವರೆಗೆ ಜಗ್ಗಾಡುತ್ತಾ ನಡಿಯುತ್ತದೆ. ಲೋಕಸಭೆ ಚುನಾವಣೆ ಒಳಗೆ ಯಾವ ಗುಂಪು ಯಾವ ಕಡೆ ಬರುತ್ತದೆ ಗೊತ್ತಿಲ್ಲ ಎಂದು ಕುಟುಕಿದ್ದಾರೆ.
ನೋಡ್ರೀ.. ಈ ಗ್ಯಾರೆಂಟಿಗಳಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ನೀರಾವರಿ ಯೋಜನೆ ಬಂದ್ ಆಗಿವೆ, ಉಳಿದ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ. ದಲಿತರಿಗೆ ಕೊಡುವಂತಹ ಹಣವನ್ನು ಗ್ಯಾರೆಂಟಿಗೆ ಹಾಕಿದ್ದಾರೆ. ಗ್ಯಾರೆಂಟಿಯನ್ನು ಈಡೇರಿಸಲು ಆಗುವುದಿಲ್ಲ, ವರ್ಷಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಬೇಕು. ರೈತರಿಗೆ ಎರಡು ಸಾವಿರ ಪರಿಹಾರ ಕೊಡ್ತಿನಿ ಅಂತಾರೆ. ಮಹಿಳೆಯರಿಗೆ ಎರಡು ಸಾವಿರ ಕೊಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದು ಇಳಿಸಬೇಕು ಅಂತ ಒಂದು ಗುಂಪು
ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಬೆಳೆ ನಾಶವಾಗಿದೆ. ಅವನಿಗೆ ಎರಡು ಸಾವಿರ ಕೊಟ್ಟರೆ ಏನು ಪ್ರಯೋಜನ? ಅದು ಭಿಕ್ಷುಕರಿಗೆ ಕೊಟ್ಟಂಗೆ ಆಗುತ್ತದೆ. ಇಂತಹ ಪರಿಸ್ಥಿತಿ ಒಳಗೆ ಈ ಸರ್ಕಾರಕ್ಕೆ ಭವಿಷ್ಯವಿಲ್ಲ. ಅವರೊಳಗೆ ಎಷ್ಟು ದ್ವೇಷ ಇದೆ ಅಂದರೆ, ಸಿದ್ದರಾಮಯ್ಯ ಅವರನ್ನು ಇಳಿಸಬೇಕು ಅಂತ ಒಂದು ಗುಂಪು. ನಮ್ಮ ಸರ್ಕಾರ ಬಿದ್ದರು ಪರವಾಗಿಲ್ಲ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೊನೆ ಮುಖ್ಯಮಂತ್ರಿ ಆಗಬೇಕು ಅಂತ ಒಂದು ಗುಂಪು. ಜಮೀರ್ ಅಹ್ಮದ್ ಖಾನ್, ಪಾನು, ಫ್ಯಾನು ಅವರೆಲ್ಲಾ ಬರೋಬ್ಬರಿ ಮಾಡ್ತಾರೆ ಎಂದು ಯತ್ನಾಳ್ ಗುಡುಗಿದ್ದಾರೆ.