Friday, November 22, 2024

BGS ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ : ವಿದ್ಯಾರ್ಥಿಗಳಿಂದ ತಂದೆ-ತಾಯಿಗೆ ಪಾದ ಪೂಜೆ!

ಧಾರವಾಡ : ಬದಲಾದ ಜನಜೀವನ, ಶಿಕ್ಷಣ ವ್ಯವಸ್ಥೆಯ ನಡುವೆ ನಾವು ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯುತ್ತಿದ್ದೇವೆ. ತಂದೆ ತಾಯಿಗಳನ್ನು ನೋಡಿಕೊಳ್ಳಲಾರದ ಸ್ವಾರ್ಥ ವ್ಯವಸ್ಥೆಯ ನಡುವೆ ಧಾರವಾಡದ BGS ಶಾಲೆ ವಿಶೇಷ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

ಧಾರವಾಡದ ಬಿಜಿಎಸ್ ಶಾಲೆ ವಿಶೇಷವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. 100ಕ್ಕೂ ಹೆಚ್ಚು ಪೋಷಕರಿಗೆ ಅವರ ಮಕ್ಕಳು ಪೂಜಾ ಕೈಂಕರ್ಯಗಳೊಂದಿಗೆ ಸಾಮೂಹಿಕ ಪಾದಪೂಜೆ ನೆರವೇರಿಸಿ ತಂದೆತಾಯಿ ಆಶೀರ್ವಾದ ಪಡೆದರು.

ವಿದ್ಯಾರ್ಥಿಗಳಿಗೆ ತಂದೆತಾಯಿಯ ಮಹತ್ವವನ್ನು ತಿಳಿಸುವ ಜೊತೆಗೆ ಮರೆಯಾಗುತ್ತಿರುವ ನಮ್ಮ ಭಾರತೀಯ ಸಂಸ್ಕೃತಿಯನ್ನು ತಿಳಿ ಹೇಳುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಮಂತ್ರಗಳೊಂದಿಗೆ ತಂದೆತಾಯಿ ಪಾದಗಳನ್ನು ತೊಳೆದು ಅರ್ಥಪೂರ್ಣವಾಗಿ ಪೂಜೆಯನ್ನು ನೇರವೆರಿಸಿದರು.ದಿನವಿಡೀ ಹೊಸದೊಂದು ಲೋಕದಲ್ಲಿ ಪಾದಪೂಜೆ ಹರಟೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಸಾಮೂಹಿಕ ಪಾದಪೂಜಾ ಕಾರ್ಯಕ್ರಮದಲ್ಲಿ ಮಕ್ಕಳು ತಂದೆ ತಾಯಿಗಳಿಗೆ ಪಾದಪೂಜೆ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಇದೇ ವೇಳೆ ಪೋಷಕರು BGS ಶಾಲೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಸ್ವಾಮೀಜಿ ಭಾಗಿ

ಪರಮಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 80ನೇ ವರ್ಷದ ಜನ್ಮದಿನೋತ್ಸವ ಹಾಗೂ 11ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಈ ವಿಶೇಷ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಈ ಕಾರ್ಯಕ್ರಮ ಈಗಿನ ಸಮಾಜಕ್ಕೆ ಮಾದರಿ. ಇಂಥ ಅರ್ಥಪೂರ್ಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ಶಾಲೆಗಳಲ್ಲಿ ಕೇವಲ ಓದು ಬರಹ ಶೈಕ್ಷಣಿಕ ಮೌಲ್ಯಗಳನ್ನು ಕಲಿಸಿದರೆ ಸಾಲದು. ಅದರೊಂದಿಗೆ ಮಕ್ಕಳಿಗೆ ತಂದೆ-ತಾಯಿಯ ಪ್ರಾಮುಖ್ಯತೆ ಜೊತೆಗೆ ನೈತಿಕ ಮೌಲ್ಯಗಳು ಕೂಡಾ ತುಂಬಾ ಮಹತ್ವದ್ದು ಎಂಬುದನ್ನು ತಿಳಿಸಲು ಈ ಕಾರ್ಯಕ್ರಮ ವಿಶೇಷವಾಗಿತ್ತು.

RELATED ARTICLES

Related Articles

TRENDING ARTICLES