ಶಿವಮೊಗ್ಗ : ಡಿ.ಕೆ. ಶಿವಕುಮಾರ್ ಪ್ರಯತ್ನ ದೇಶದಲ್ಲಿ ಎಲ್ಲೂ ಸಫಲವಾಗಲ್ಲ. ಮುಂದಿನ ಚುನಾವಣೆಯಲ್ಲಿ ಕನಕಪುರ ಜನ ಏನು ಮಾಡ್ತಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕುಟುಕಿದರು.
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನಲೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಾಕಷ್ಟು ಗುಂಡಿಗಳಿವೆ. ಬಿಬಿಎಂಪಿ ನಿಮ್ಮ ಕೈಯಲ್ಲಿದೆ. ನೀವು ಬೆಂಗಳೂರಿಗೆ ಬಂದು ಗುಂಡಿ ತುಂಬಿಸುವ ಕೆಲಸ ಮಾಡಿ ಎಂದು ಚಾಟಿ ಬೀಸಿದರು.
ಗ್ಯಾರಂಟಿ ಯೋಜನೆ ಮೂಲಕ ಕಾಂಗ್ರೆಸ್ ಮತದಾರರಿಗೆ ಮೋಸ ಮಾಡಿದೆ. ಕಾಂಗ್ರೆಸ್ ತನ್ನ ಸಾಧನೆಗಿಂತ ಗ್ಯಾರಂಟಿಯ ಮೋಸದ ಭರವಸೆ ನೀಡುತ್ತಿದೆ. ತೆಲಂಗಾಣದ ಶಾಸಕರಿಗೆ ಇದು ಅರ್ಥವಾಗಿದೆ. ಮೂರು ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ. ನಾವು ಏಕೆ ಕಾಂಗ್ರೆಸ್ ಜೊತೆ ಹೋಗಬೇಕು ಅಂತಾ ಅನಿಸಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಶಾಸಕರನ್ನು ಕಟ್ಟು ಹಾಕಬೇಕು ಅಂತಾ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಬುದ್ದಿ ಇಲ್ಲ
ಕಾಂಗ್ರೆಸ್ ನವರಿಗೆ ಬುದ್ದಿ ಇಲ್ಲ. ಈಗಾಗಲೇ ಅವರು ಬಡಿದಾಡಿ ಕೊಳ್ಳುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಒಂದಾಗಲ್ಲ. ರಾಜ್ಯದ ಬಿಜೆಪಿ ನಾಯಕರು ಎಲ್ಲರೂ ಒಟ್ಟಾಗಿ ಮುಂದೆ ಹೋಗ್ತೇವೆ. ಒಂದಿಬ್ಬರಲ್ಲಿ ಭಿನ್ನಾಭಿಪ್ರಾಯ ಇದೆ. ದೇಶದ ಹಿತಕೋಸ್ಕರ ಮುಂದಿನ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಈ ಚುನಾವಣಾ ಫಲಿತಾಂಶ ನೂರಕ್ಕೆ ನೂರರಷ್ಟು ದಿಕ್ಸೂಚಿ ಆಗಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದ ನಾಯಕರು ಸರಿ ಮಾಡುತ್ತಾರೆ
ಕರ್ನಾಟಕದ ರಾಜಕಾರಣದ ಭವಿಷ್ಯದ ಬಗ್ಗೆ ನಾವು ಏನು ತಪ್ಪು ಮಾಡಿದ್ದೇವೆ ಎಂಬುದು ಹಿಂದಿನ ಚುನಾವಣೆಯಲ್ಲಿ ಗೊತ್ತಾಗಿದೆ. ಚುನಾವಣೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಕೇಂದ್ರದ ನಾಯಕರು ಸರಿ ಮಾಡುತ್ತಾರೆ. ಕರ್ನಾಟಕದ ಸೋಲು ದೇಶದಲ್ಲಿ ನೀವು ಹೀಗೆ ಬಾರದು ಅಂತಾ ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.