ದಾವಣಗೆರೆ : ಪಂಚರಾಜ್ಯ ಚುನಾವಣೆ ಸೆಮಿ ಫೈನಲ್ ಇದ್ದಂತೆ. ಇಲ್ಲಿ ಗೆದ್ದು ಲೋಕಸಭೆ ಚುನಾವಣೆನೂ ಗೆಲ್ಲುತ್ತೇವೆ. ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ದಿನ. ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸಮೀಕ್ಷೆಗಳು ಕೂಡ ನಮ್ಮ (ಕಾಂಗ್ರೆಸ್) ಪರವಾಗಿ ಬಂದಿವೆ. ಪಂಚರಾಜ್ಯ ಚುನಾವಣೆ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. 15 ಲಕ್ಷ ಹಣ ಖಾತೆಗೆ ಬಂದಿಲ್ಲ, ಉದ್ಯೋಗ ಸೃಷ್ಠಿಯಾಗಿಲ್ಲ. ಬರೀ ನಮ್ ಕೀ ಬಾತ್ ಮಾಡಿಕೊಂಡು ಕಾಮ್ ಕೀ ಬಾತ್ ಮರ್ತಿದ್ದಾರೆ. ಈ ಬಾರಿ I.N.D.I.A ಅಧಿಕಾರಕ್ಕೆ ಬರೋದು ಶತಸಿದ್ದ. ಈ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಈ ಜೋಡೆತ್ತುಗಳಿಂದ ತೊಂದರೆ ಆಗಲ್ಲ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕರಾಗಿ ಆರ್. ಅಶೋಕ್ ಇಬ್ಬರು ಆಯ್ಕೆಯಾಗಿದ್ದು ಆರು ತಿಂಗಳ ನಂತರ. ಈ ಜೋಡೆತ್ತುಗಳಿಂದ ಕಾಂಗ್ರೆಸ್ ಗೆ ಯಾವುದೇ ತೊಂದರೆ ಇಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 25ಕ್ಕೂ ಹೆಚ್ವು ಸ್ಥಾನ ಗೆಲ್ಲುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಮಾತನಾಡುವುದು ಬಿಟ್ಟರೆ ಬೇರೆನೂ ಕೆಲಸ ಇದೆ ಅವರಿಗೆ. ಜಮೀರ್ ಬಗ್ಗೆ ಅ ರೀತಿಯಾಗಿ ಮಾತನಾಡೋದು ಸರಿಯಲ್ಲ ಎಂದು ಸಲೀಂ ಅಹಮ್ಮದ್ ಕುಟುಕಿದ್ದಾರೆ.