ಬೆಂಗಳೂರು : ಕರ್ನಾಟಕ ಆರ್ಥಿಕವಾಗಿ ಸಬಲವಾಗಿರುವ ರಾಜ್ಯ. ಇಲ್ಲಿ ನಯಾ ಪೈಸೆ ಹುಟ್ಟದಂತೆ ಮಾಡಿದ್ದೀರಿ. ನಾವು ಆರ್ಥಿಕತೆ ಸರಿ ದಾರಿಗೆ ತಂದಿದ್ದರಿಂದ, ನೀವು ಉಚಿತ ಗ್ಯಾರಂಟಿ ಕೊಡಲು ಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇವರು ಬಡವರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಜಿಲ್ಲೆಯಲ್ಲಿ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದೆ. ಇದು ಮಾಫಿಯಾ ರೀತಿ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಶಾಮೀಲಾಗಿರೋದು ಸ್ಪಷ್ಟವಾಗಿದೆ ಎಂದು ಗುಡುಗಿದರು.
ಸಿಎಂ ಸಿದ್ದರಾಮಯ್ಯನವರೇ ತಾವೇ ಮಂಡಿಸಿರುವ ಬಜೆಟ್‌ನಲ್ಲಿ ಎಷ್ಟು ಆಡಳಿತಾತ್ಮಕ ಅನುಮೋದನೆ ನೀಡಿದ್ದೀರಿ? ಈ ವರ್ಷದಲ್ಲಿ ಇನ್ನು ಮೂರು ತಿಂಗಳಿದೆ. ಕ್ಯಾಪಿಟಲ್ ಅಕೌಂಟಿಗೆ ಎಷ್ಟು ಬಡವಾಳ ಹಾಕಿದ್ದೀರಿ, ಎಷ್ಟು ಬಾಕಿ ಇದೆ. ಎಷ್ಟು ಅನುಷ್ಠಾನಕ್ಕೆ ತಂದಿದ್ದೀರಿ? ಎಷ್ಟಕ್ಕೆ ಹಣ ಮೀಸಲಿಟ್ಟುದ್ದೀರಿ. ಸದನಕ್ಕೆ ಮಾಹಿತಿ ನೀಡುವಂತೆ ಆಗ್ರಹ ಮಾಡುತ್ತೇನೆ ಎಂದು ಛೇಡಿಸಿದರು.
ಸರ್ಕಾರ ಮೋಸ ಮಾಡುವ ಕೆಲಸ ಮಾಡ್ತಿದೆ
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮೊದಲ ತಿಂಗಳಲ್ಲಿ ಸರಿಪಡಿಸಬೇಕು ಅಂದ್ರು, ಮೂರು ತಿಂಗಳಾಗಿದೆ. ಮೊದಲ ತಿಂಗಳು 2,000 ರೂ. ಬಂದವರಿಗೆ, ಎರಡನೇ ತಿಂಗಳು ಬಂದಿಲ್ಲ. ಸರ್ಕಾರ ಮೋಸ ಮಾಡುವ ಕೆಲಸ ಮಾಡ್ತಿದೆ. ಎರಡು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಎರಡು ಪಟ್ಟು ದರ ಕಟ್ಟುವಂತಾಗಿದೆ. ಎಲ್ಲಾ ವಿದ್ಯುತ್ ಶಕ್ತಿ ಅಕೌಂಟ್ ಸರಿಪಡಿಸೋದೇ ಕೆಲಸ ಆಗಿದೆ ಎಂದು ಕುಟುಕಿದರು.
ಏನೋ ಸಾಧನೆ ಮಾಡಿರೋ ತರ ಮಾತನಾಡ್ತಿರಿ
ರೈತರಿಗೆ ವಿದ್ಯುತ್ ಸಿಗುತ್ತಿಲ್ಲ. ಐದು ಗಂಟೆ ಕೊಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಎರಡು ಗಂಟೆ ಮೇಲೆ ವಿದ್ಯುತ್ ಸಿಗುತ್ತಿಲ್ಲ. ಪಂಪ್ ಸೆಟ್ ಉಚಿತ ಇಲ್ಲದೆ, ಅವರೇ ಕಟ್ಟಿಕೊಳ್ಳಲು ಎರಡು ಲಕ್ಷ ಆಗ್ತಿದೆ. ಇದೆಲ್ಲಾ ಇದ್ದರೂ ತೆಲಂಗಾಣದಲ್ಲಿ ಏನೋ ಸಾಧನೆ ಮಾಡಿದವರ ತರ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು.